ADVERTISEMENT

ಆರ್‌ವಿಎಂ: ಅಗತ್ಯತೆ ಪ್ರಶ್ನಿಸಿದ ವಿರೋಧ ಪಕ್ಷಗಳು

ಪಿಟಿಐ
Published 16 ಜನವರಿ 2023, 14:03 IST
Last Updated 16 ಜನವರಿ 2023, 14:03 IST
ದಿಗ್ವಿಜಯ್‌ ಸಿಂಗ್‌
ದಿಗ್ವಿಜಯ್‌ ಸಿಂಗ್‌   

ನವದೆಹಲಿ: ವಲಸಿಗ ಮತದಾರರು ತಾವಿರುವ ಸ್ಥಳದಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗವು ದೂರನಿಯಂತ್ರಿತ ವಿದ್ಯುನ್ಮಾನ ಮತಯಂತ್ರದ (ಆರ್‌ವಿಎಂ) ಮಾದರಿ ಅಭಿವೃದ್ಧಿಪಡಿಸಿದ್ದು, ವಿರೋಧ ಪಕ್ಷಗಳು ಇದರ ಅಗತ್ಯತೆಯನ್ನು ಪ್ರಶ್ನಿಸಿವೆ.

ಆಯೋಗವು ರಾಜಕೀಯ ಪಕ್ಷಗಳಿಗಾಗಿ ಸೋಮವಾರ ಆರ್‌ವಿಎಂ ಕಾರ್ಯಶೈಲಿ ಕುರಿತ ಪ್ರಾತ್ಯಕ್ಷಿಕೆ ಹಮ್ಮಿಕೊಂಡಿತ್ತು. ಇದರಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌, ‘ಆರ್‌ವಿಎಂ ಕುರಿತ ಪ್ರಾತ್ಯಕ್ಷಿಕೆ ವೀಕ್ಷಿಸಬೇಕೆಂದು ಯಾವ ವಿರೋಧ ಪಕ್ಷವೂ ಬಯಸಿರಲಿಲ್ಲ. ಈ ಮತ ಯಂತ್ರಗಳು ಏತಕ್ಕಾಗಿ ಬೇಕು ಎಂಬ ಪ್ರಶ್ನೆ ಉದ್ಭವಿಸಿದ್ದು, ಈ ಕುರಿತು ಆಯೋಗವು ಮೊದಲು ಸ್ಪಷ್ಟನೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಆರ್‌ವಿಎಂ ಕಲ್ಪನೆಯು ಒಪ್ಪತಕ್ಕದ್ದಲ್ಲ. ನಗರ ನಿವಾಸಿಗಳು ಮತದಾನ ಪ್ರಕ್ರಿಯೆ ಕುರಿತು ನಿರಾಸಕ್ತಿ ಹೊಂದಿರುವುದು ಏಕೆ ಎಂಬುದರ ಕುರಿತು ಆಯೋಗ ಮೊದಲು ವಿವರಣೆ ನೀಡಬೇಕು. ಎಲೆಕ್ಟ್ರಾನಿಕ್‌ ಮತ ಯಂತ್ರಗಳ ಕುರಿತು ಈ ದೇಶದ ನಾಗರಿಕರು ಎತ್ತಿರುವ ಪ್ರಶ್ನೆಗಳಿಗೂ ಉತ್ತರ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಪ್ರಾತ್ಯಕ್ಷಿಕೆ ವೀಕ್ಷಣೆಗಾಗಿ ಮಾನ್ಯತೆ ಹೊಂದಿರುವ 8 ರಾಷ್ಟ್ರೀಯ ಪಕ್ಷಗಳು ಹಾಗೂ ರಾಜ್ಯಗಳ 57 ಪಕ್ಷಗಳ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿತ್ತು.

ಸಾರ್ವಜನಿಕ ವಲಯದ ಉದ್ದಿಮೆ ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಇಸಿಐ) ಆರ್‌ವಿಎಂ ಅಭಿವೃದ್ಧಿಪಡಿಸಿದೆ. ಇಸಿಐ ಹಾಗೂ ಬಿಇಎಲ್‌ ಸಂಸ್ಥೆಗಳು ಈ ಯಂತ್ರಗಳನ್ನು ತಯಾರಿಸಲಿವೆ. ಒಂದು ಮತಗಟ್ಟೆಯಲ್ಲಿ ಇರಿಸಲಾಗುವ ಆರ್‌ವಿಎಂನಿಂದ 72 ಕ್ಷೇತ್ರಗಳ ಮತದಾನ ಪ್ರಕ್ರಿಯೆ ನಿಭಾಯಿಸಬಹುದು ಎಂದು ಆಯೋಗ ತಿಳಿಸಿದೆ.

ಮತದಾನ ಪ್ರಕ್ರಿಯೆಯಲ್ಲಿ ವಲಸಿಗ ಮತದಾರರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದಕ್ಕಾಗಿ ಆರ್‌ವಿಎಂ ಅಭಿವೃದ್ಧಿಪಡಿಸಲಾಗಿದೆ. ಇದು ಅನುಷ್ಠಾನಗೊಂಡರೆ ವಲಸಿಗರು ತಾವು ವಾಸವಿರುವ ಸ್ಥಳದಿಂದಲೇ ಮತದಾನ ಮಾಡಬಹುದು. ಮತದಾನಕ್ಕಾಗಿ ತಮ್ಮ ಊರುಗಳಿಗೆ ಪ್ರಯಾಣಿಸುವ ಪ್ರಮೇಯ ಎದುರಾಗುವುದಿಲ್ಲ.

ಆರ್‌ವಿಎಂ ಅನುಷ್ಠಾನಕ್ಕಾಗಿ ಕಾನೂನಿನಲ್ಲಿ ಏನಾದರೂ ಮಾರ್ಪಾಡು ಮಾಡುವ ಅಗತ್ಯವಿದೆಯೇ ಎಂಬುದರ ಕುರಿತು ಲಿಖಿತವಾಗಿ ತಮ್ಮ ಅಭಿಪ್ರಾಯ ಸಲ್ಲಿಸುವಂತೆ ಆಯೋಗವು ಎಲ್ಲಾ ರಾಜಕೀಯ ಪಕ್ಷಗಳಿಗೂ ಸೂಚಿಸಿದೆ.

ಕಾಂಗ್ರೆಸ್‌ ಪಕ್ಷವು ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ವಿರೋಧ ಪಕ್ಷಗಳ ನಾಯಕರು ಆರ್‌ವಿಎಂ ಪ್ರಸ್ತಾವನೆ ತಿರಸ್ಕರಿಸುವ ಕುರಿತ ನಿರ್ಣಯ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.