ADVERTISEMENT

ಅಸ್ಸಾಂಗೆ ಪ್ರಧಾನಿ ಮೋದಿ ಭೇಟಿ: ಸಿಎಎ ವಿರೋಧಿಸಿ ವಿರೋಧ ಪಕ್ಷಗಳ ಪ್ರತಿಭಟನೆ

ಪಿಟಿಐ
Published 8 ಮಾರ್ಚ್ 2024, 10:49 IST
Last Updated 8 ಮಾರ್ಚ್ 2024, 10:49 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಅವರ ಅಸ್ಸಾಂ ಭೇಟಿ ಹಿನ್ನೆಲೆಯಲ್ಲಿ, ವಿರೋಧ ಪಕ್ಷಗಳು ‘ಪೌರತ್ವ ತಿದ್ದುಪಡಿ ಕಾಯ್ದೆ’ಯನ್ನು (ಸಿಎಎ) ವಿರೋಧಿಸಿ ನಾಗಾಂವ್‌ ಜಿಲ್ಲೆಯ ಕಲಿಯಾಬೋರ್‌ನಲ್ಲಿ ಪ್ರತಿಭಟನೆ ನಡೆಸಿವೆ.

ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲು ಪ್ರಧಾನಿ ಮೋದಿ ಎರಡು ದಿನಗಳ ಅಸ್ಸಾಂ ಪ್ರವಾಸ ಕೈಗೊಂಡಿದ್ದಾರೆ.

ADVERTISEMENT

ಅಸ್ಸಾಂ 16 ಪಕ್ಷಗಳ ಕೂಟವಾದ ‘ಯುನೈಟೆಡ್ ಅಪೋಸಿಷನ್ ಫೋರಂ ಅಸ್ಸಾಂ’ (ಯುಒಎಫ್‌ಎ) ಕಾಜಿರಂಗದ ಬಳಿ ಧರಣಿ ನಡೆಸಿತು. ರಾಜ್ಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಇಂದು ರಾತ್ರಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಕೊಹೊರಾ ಶ್ರೇಣಿಯಲ್ಲಿ ವಾಸ್ತವ್ಯ ಹೊಡಲಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಯುಒಎಫ್‌ಎ ವಕ್ತಾರ ಅಖಿಲ್‌ ಗೊಗೊಯ್‌, ‘ಪ್ರತಿಭಟನೆಯನ್ನು ಶನಿವಾರದಂದು ನಿಗದಿಪಡಿಸಲಾಗಿತ್ತು. ಆದರೆ, ಪ್ರಧಾನಿ ಮೋದಿ ಅವರು ಅಹೋಮ್‌ ಜನರಲ್‌ ಲಚಿತ್‌ ಬೊರ್ಫುಕನ್‌ ಅವರ ಪ್ರತಿಮೆಯನ್ನು ನಾಳೆ ಅನಾವರಣಗೊಳಿಸಲಿದ್ದಾರೆ. ಹೀಗಾಗಿ, ಪ್ರತಿಭಟನೆಯ ದಿನಾಂಕವನ್ನು ಬದಲಾಯಿಸುವಂತೆ ಸಮುದಾಯದವರು ಮನವಿ ಮಾಡಿದರು. ಆದ್ದರಿಂದ, ಒಂದು ದಿನ ಮುಂಚಿತವಾಗಿ ಪ್ರತಿಭಟನೆ ನಡೆಸಲಾಯಿತು’ ಎಂದು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಭೂಪೇನ್‌ ಕುಮಾರ್‌ ಬೋರಾ ಮಾತನಾಡಿ, ‘ಸರ್ಕಾರವು ನಮ್ಮ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸಿಎಎ ವಿರುದ್ಧದ ವಿರೋಧದ ಬಗ್ಗೆ ತಿಳಿಸಲು ಪ್ರಧಾನಿ ಅವರ ಭೇಟಿಗೆ ಮನವಿ ಮಾಡಲಾಗಿತ್ತು. ಆದರೆ, ಅವರ ಕಚೇರಿಯಿಂದ ಯಾವುದೇ ಉತ್ತರ ಬಂದಿಲ್ಲ’ ಎಂದು ಹೇಳಿದ್ದಾರೆ.

ಆಲ್‌ ಅಸ್ಸಾಂ ಸ್ಟೂಡೆಂಟ್ಸ್‌ ಯೂನಿಯನ್‌ (ಎಎಎಸ್‌ಯು) ಮತ್ತು 30 ಇತರ ಸಂಘಟನೆಗಳು ಈ ಹಿಂದೆ ಸಿಎಎ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದವು ಎಂದು ಯುಒಎಫ್‌ಎ ತಿಳಿಸಿದೆ.

ಬಾಂಗ್ಲಾದೇಶ, ಅಫ್ಗಾನಿಸ್ತಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವುದಕ್ಕೆ ಸಂಬಂಧಿಸಿದ ಮಸೂದೆ ಇದಾಗಿದೆ.

ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇತ್ತೀಚೆಗೆ ಹೇಳಿದ್ದರು.

ಈ ವಿಷಯದಲ್ಲಿ ರಾಷ್ಟ್ರಪತಿ ದೌಪ್ರದಿ ಮುರ್ಮು ಅವರು ಮಧ್ಯಪ್ರವೇಶಿಸುವಂತೆ ಕೋರಿ ಪತ್ರ ಬರೆಯಲಾಗಿದೆ. ಸಿಎಎ ರದ್ದುಗೊಳಿಸದಿದ್ದಲ್ಲಿ ರಾಜ್ಯಾದಾದ್ಯಂತ ಪ್ರಜಾಸತ್ತಾತ್ಮಕ ಜನಾಂದೋಲನ ನಡೆಸುವುದಾಗಿ ಅಸ್ಸಾಂ ವಿರೋಧ ಪಕ್ಷಗಳು ಎಚ್ಚರಿಕೆ ನೀಡಿವೆ.

ಸಿಎಎ ಅನ್ನು ವಿರೋಧಿಸುವವರು ಆಂದೋಲನಗಳನ್ನು ನಡೆಸುವ ಬದಲು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.