ADVERTISEMENT

ಪವಾರ್ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಭೆ: ವಿರೋಧಿ ಮೈತ್ರಿಕೂಟದ ಮೊದಲ ಮೆಟ್ಟಿಲು?

ಪವಾರ್ ನೇತೃತ್ವದಲ್ಲಿ ಇಂದು ಸಭೆ; ಪ್ರಶಾಂತ್ ಕಿಶೋರ್ ಜತೆ ಮಾತುಕತೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 1:53 IST
Last Updated 22 ಜೂನ್ 2021, 1:53 IST
ಶರದ್‌ ಪವಾರ್‌ (ಪಿಟಿಐ ಚಿತ್ರ)
ಶರದ್‌ ಪವಾರ್‌ (ಪಿಟಿಐ ಚಿತ್ರ)   

ನವದೆಹಲಿ: 2022ರ ರಾಷ್ಟ್ರಪತಿ ಚುನಾವಣೆ ಮತ್ತು 2024ರ ಸಾರ್ವತ್ರಿಕ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟು ಪ್ರಾದೇಶಿಕ ಮೈತ್ರಿಕೂಟ ಕಟ್ಟುವ ಯತ್ನದ ಭಾಗವಾಗಿ ದೆಹಲಿಯಲ್ಲಿ ಮಂಗಳವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನೇತೃತ್ವದಲ್ಲಿಪ್ರತಿಪಕ್ಷಗಳ ನಾಯಕರು ಸಭೆ ನಡೆಸಲಿದ್ದಾರೆ.

ಚುನಾವಣಾ ರಾಜಕೀಯ ನಿಪುಣ ಪ್ರಶಾಂತ್ ಕಿಶೋರ್ ಅವರು ಶರದ್ ಪವಾರ್ ಅವರ ಜೊತೆ ಸೋಮವಾರ ಎರಡು ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ. ಹದಿನೈದು ದಿನಗಳ ಅವಧಿಯಲ್ಲಿ ಪವಾರ್– ಕಿಶೋರ್ ಮಧ್ಯೆ ನಡೆದ ಎರಡನೇ ಮಾತುಕತೆ ಇದಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ಸಮರ್ಥ ಮೈತ್ರಿಕೂಟವನ್ನು ರಚಿಸುವ ಯತ್ನವಿದು ಎನ್ನಲಾಗುತ್ತಿದೆ.

ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪವಾರ್ ಮಂಗಳವಾರದಿಂದ ಕೆಲಸ ಮಾಡುವರು. ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯು ಮುಂಬರುವ ಲೋಕಸಭಾ ಅಧಿವೇಶನದ ಬಗ್ಗೆ ಮತ್ತು ದೇಶದ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲಿದೆ ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಹೇಳಿದ್ದಾರೆ.

ADVERTISEMENT

ಸಭೆಯಲ್ಲಿ ಮಾಜಿ ಹಣಕಾಸು ಸಚಿವ ಹಾಗೂ ಟಿಎಂಸಿಮುಖಂಡ ಯಶವಂತ್ ಸಿನ್ಹಾ, ಎಎಪಿ ಸಂಸದ ಸಂಜಯ್ ಸಿಂಗ್, ಸಿಪಿಐನ ಡಿ. ರಾಜಾ, ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದ ಫಾರೂಕ್ ಅಬ್ದುಲ್ಲಾ, ಬಿಜೆಪಿ ಮಾಜಿ ನಾಯಕ ಸುಧೀಂದ್ರ ಕುಲಕರ್ಣಿ, ಜೆಡಿಯುನ ಮಾಜಿ ಸಂಸದ ಪವನ್ ವರ್ಮಾ, ಕಾಂಗ್ರೆಸ್ ಮಾಜಿ ವಕ್ತಾರ ಸಂಜಯ್ ಝಾ, ಮಾಜಿ ಸಂಸದರಾದ ಕೆಟಿಎಸ್ ತುಳಸಿ, ಜಾವೇದ್ ಅಖ್ತರ್, ಎನ್‌ಸಿಪಿ ಸಂಸದರಾದ ವಂದನಾ ಚವಾಣ್ ಮತ್ತು ಮಾಜಿ ಸಂಸದ ಮಜೀದ್ ಮೆಮನ್ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಮೋದಿಯವರ ಕಟು ವಿಮರ್ಶಕ ಯಶವಂತ್ ಸಿನ್ಹಾ ಅವರು ಪ್ರತಿಪಕ್ಷಗಳಗನ್ನು ಒಗ್ಗೂಡಿಸುವ ಪ್ರಯತ್ನಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಯುಪಿಎ ಸಂಭಾವ್ಯ ಅಧ್ಯಕ್ಷರಾಗಿ ಪವಾರ್ ಅವರನ್ನು ಯೋಜಿಸುವ ಚಿಂತನೆಯೂ ಇದ್ದು, ಮುಖ್ಯ ವಿರೋಧ ಪಕ್ಷವಾದ ಕಾಂಗ್ರೆಸ್‌ ಮುಖಂಡರು ಈ ಸಭೆಗೆ ಹಾಜರಾಗುತ್ತಾರೆಯೇ ಎಂಬ ಕುತೂಹಲ ಇದೆ.

ಮುಂದಿನ ವರ್ಷ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಪಕ್ಷ ನಾಯಕರು ಹೇಗೆ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ಇದು ತೋರಿಸುತ್ತಿದೆ. ಪವಾರ್ ಅವರು ಎಲ್ಲ ರಾಜಕೀಯ ಪಕ್ಷಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ವಿರೋಧ ಪಕ್ಷದ ಅನೇಕರಿಗೆ ಇದನ್ನು
ಸಾಧಿಸಲು ಸಾಧ್ಯವಿಲ್ಲ ಎಂದು ಮಲಿಕ್‌ ಹೇಳಿದ್ದಾರೆ.

2012ರ ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಪ್ರಣಬ್ ಮುಖರ್ಜಿ ಅವರು ಎನ್‌ಡಿಎ ಮನವೊಲಿಸಲು ಯಶಸ್ವಿಯಾಗಿದ್ದರು. ಜೆಡಿಯು ಮತ್ತು ಶಿವಸೇನಾದ ಬೆಂಬಲವನ್ನೂ ಪಡೆದಿದ್ದರು. ಪವಾರ್ ಎಲ್ಲಾ ಪಕ್ಷಗಳನ್ನು ಸೆಳೆಯುವ ಶಕ್ತಿಯಾಗಿ ಹೊರಹೊಮ್ಮಿದರೆ, 2022ರ ರಾಷ್ಟ್ರಪತಿ ಚುನಾವಣೆಯು ಅವರಿಗೆ ಮೊದಲ ಪರೀಕ್ಷೆಯಾಗಲಿದೆ.ಕಾಂಗ್ರೆಸ್ ಇಲ್ಲಿಯವರೆಗೆ ಈ ವಿಷಯದ ಬಗ್ಗೆ ತನ್ನ ಅಭಿಪ್ರಾಯ ತಿಳಿಸದ ಕಾರಣ, ಕಾಂಗ್ರೆಸ್‌ ಹಾಗೂ ಬಿಜೆಪಿಯೇತರ ಪಕ್ಷಗಳ ಗುಂಪು ಕಟ್ಟುವ ಸಾಧ್ಯತೆಯನ್ನು ಪ್ರಾದೇಶಿಕ ಪಕ್ಷಗಳು ಎದುರು ನೋಡುತ್ತಿವೆ.

‘ಕಾಂಗ್ರೆಸ್ ಮುಖ್ಯಮಂತ್ರಿ’

ಅತ್ತ ಪ್ರಾದೇಶಿಕ ನಾಯಕರೊಂದಿಗೆ ಪವಾರ್ ಅವರ ಸಭೆ ನಿಗದಿಯಾಗಿ
ದ್ದರೆ, ಇತ್ತ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚವಾಣ್ ಅವರು, ಮುಂದಿನ ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದವರಾಗಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದಾಗಿಯೂ ಹೇಳಿದ್ದಾರೆ.

ಈ ಮಾತುಗಳು ಶಿವಸೇನೆ–ಎನ್‌ಸಿಪಿ–ಕಾಂಗ್ರೆಸ್ ಮೈತ್ರಿಕೂಟದ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಗೊಂದಲ ಸೃಷ್ಟಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.