ADVERTISEMENT

ಜ.31ರಿಂದ ಬಜೆಟ್ ಅಧಿವೇಶನ: ಪೆಗಾಸಸ್‌ ವಿಷಯ ಪ್ರಸ್ತಾಪಕ್ಕೆ ವಿಪಕ್ಷಗಳ ಚಿಂತನೆ

ಪಿಟಿಐ
Published 30 ಜನವರಿ 2022, 12:29 IST
Last Updated 30 ಜನವರಿ 2022, 12:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನ ಸೋಮವಾರ (ಜ.31) ಆರಂಭವಾಗಲಿದೆ. ಕೃಷಿಕರ ಸಮಸ್ಯೆಗಳು, ಗಡಿಯಲ್ಲಿ ಚೀನಾದ ಅತಿಕ್ರಮಣ ಮತ್ತು ಪೆಗಾಸಸ್‌ ಗೂಢಚರ್ಯೆ ವಿಷಯಗಳು ತೀವ್ರ ಚರ್ಚೆಗೆ ಗ್ರಾಸವಾಗುವ ನಿರೀಕ್ಷೆ ಇದೆ.‌

ಮೊದಲ ದಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾಷಣ ಮಾಡುವರು. ಕೋವಿಡ್‌ ಹಿನ್ನೆಲೆಯಲ್ಲಿ ಉಭಯ ಸದನಗಳಲ್ಲೂ ಸದಸ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೊದಲ ದಿನ ಆರ್ಥಿಕ ಸಮೀಕ್ಷೆ 2021–22ರ ವರದಿಯನ್ನು ಹಾಗೂ ಮಂಗಳವಾರ (ಫೆ.1) 2022–23ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.

ADVERTISEMENT

ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಲೋಕಸಭೆ ಮತ್ತು ರಾಜ್ಯಸಭೆ ಕಲಾಪವು ಪಾಳಿ ಪದ್ಧತಿಯಡಿ ಕಾರ್ಯನಿರ್ವಹಿಸಲಿವೆ. ಪರಸ್ಪರ ಅಂತರ ಇರುವಂತೆ ಸದಸ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಲೋಕಸಭೆಯಲ್ಲಿ ಬುಧವಾರ ಚರ್ಚೆ ಆರಂಭವಾಗಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರುವರಿ 7ರಂದು ಈ ನಿರ್ಣಯಕ್ಕೆ ಉತ್ತರಿಸುವ ನಿರೀಕ್ಷೆಯಿದೆ.

ಲೋಕಸಭೆ ಸಚಿವಾಲಯದ ಅಧಿಕಾರಿಗಳ ಪ್ರಕಾರ, ವಂದನಾ ನಿರ್ಣಯದ ಮೇಲಿನ ಚರ್ಚೆಗೆ ನಾಲ್ಕು ದಿನ ನಿಗದಿಯಾಗಿದೆ. ಅಧಿವೇಶನದ ಮೊದಲ ಅವಧಿ ಜ.31ರಿಂದ ಫೆ.11ರವರೆಗೆ ನಡೆಯಲಿದ್ದು, ವಿವಿಧ ಇಲಾಖೆಗಳಿಗೆ ಹಣಕಾಸು ಹಂಚಿಕೆ ಪ್ರಸ್ತಾವ ಪರಿಶೀಲಿಸಲಿದೆ. ಎರಡನೇ ಅವಧಿಯು ಮಾರ್ಚ್‌ 14ರಂದು ಆರಂಭವಾಗಿದ್ದು, ಏಪ್ರಿಲ್‌ 8ರವರೆಗೂ ಮುಂದುವರಿಯಲಿದೆ.

ಅತಿ ಹೆಚ್ಚು ಸಂಸದರನ್ನು ಚುನಾಯಿಸುವ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯುವ ಅವಧಿಯಲ್ಲಿಯೇ ಈ ಬಾರಿ ಬಜೆಟ್ ಅಧಿವೇಶನವೂ ಸೇರುತ್ತಿದೆ. ಉತ್ತರಾಖಂಡ, ಪಂಜಾಬ್‌, ಗೋವಾ, ಮಣಿಪುರ ಚುನಾವಣೆ ನಡೆಯುತ್ತಿರುವ ಇತರೆ ರಾಜ್ಯಗಳು. ಫೆ.10 ರಿಂದ ಮಾ.7ರ ಅವಧಿಯಲ್ಲಿ ಈ ರಾಜ್ಯಗಳಲ್ಲಿ ಮತದಾನ ನಡೆಯಲಿದೆ.

‘ಸಮಾನ ಮನಸ್ಕ ಪಕ್ಷಗಳ ಜೊತೆಸೋಮವಾರ ಕಾಂಗ್ರೆಸ್‌ ಚರ್ಚೆ’
ನವದೆಹಲಿ
: ಪ್ರಮುಖ ವಿರೋಧಪಕ್ಷ ಕಾಂಗ್ರೆಸ್, ಕೃಷಿಕರ ಸಮಸ್ಯೆ ಸೇರಿದಂತೆ ವಿವಿಧ ಜ್ವಲಂತ ಸಮಸ್ಯೆಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುವ ಬಗ್ಗೆ ಸಮಾನ ಮನಸ್ಕ ಪಕ್ಷಗಳ ಜೊತೆಗೆ ಸೋಮವಾರ ಚರ್ಚಿಸಲಾಗುವುದು ಎಂದು ಹೇಳಿದೆ.

ಪೂರ್ವ ಲಡಾಖ್‌ನಲ್ಲಿ ಚೀನಾದ ಅತಿಕ್ರಮಣ, ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ, ಏರ್‌ ಇಂಡಿಯಾ ಮಾರಾಟ ಹಾಗೂ ಪೆಗಾಸಸ್‌ ಗೂಢಚರ್ಚೆ ವಿಷಯಗಳು ಈ ಅಧಿವೇಶನದಲ್ಲಿ ಬಿಸಿ ಚರ್ಚೆಗೆ ಆಸ್ಪದವಾಗುವ ಸಂಭವವಿದೆ.

ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮತ್ತು ರಾಜ್ಯಸಭೆ ಅಧ್ಯಕ್ಷ ಎಂ.ವೆಂಕಯ್ಯನಾಯ್ಡು ಅವರು ಸೋಮವಾರ ಕ್ರಮವಾಗಿ ಲೋಕಸಭೆ, ರಾಜ್ಯಸಭೆಯ ವಿವಿಧ ಪಕ್ಷಗಳ ಸಂಸದೀಯ ನಾಯಕರ ಜೊತೆಗೆ ಚರ್ಚಿಸಲಿದ್ದಾರೆ. ಸುಗಮವಾಗಿ ಕಲಾಪ ನಡೆಯುವಂತೆ ವೇದಿಕೆಯನ್ನು ಸಜ್ಜುಗೊಳಿಸುವುದು ಈ ಭೇಟಿಯ ಉದ್ದೇಶ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.