ADVERTISEMENT

ಪರೀಕ್ಷಾ ಅಕ್ರಮಕ್ಕೆ ಜೈಲು, ಭಾರಿ ದಂಡ: ಲೋಕಸಭೆಯಲ್ಲಿ ಇಂದು ಮಸೂದೆ ಮಂಡನೆ

ಪಿಟಿಐ
Published 5 ಫೆಬ್ರುವರಿ 2024, 0:30 IST
Last Updated 5 ಫೆಬ್ರುವರಿ 2024, 0:30 IST
<div class="paragraphs"><p>(ಐಸ್ಟೋಕ್ ಚಿತ್ರ)</p></div>

(ಐಸ್ಟೋಕ್ ಚಿತ್ರ)

   

ನವದೆಹಲಿ: ಕೇಂದ್ರ ಸರ್ಕಾರಿ ಹುದ್ದೆಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಸೇರಿ ಪರೀಕ್ಷಾ ಅಕ್ರಮ ಪ್ರಕರಣಗಳಲ್ಲಿ ಗರಿಷ್ಠ 10 ವರ್ಷ ಸಜೆ ಮತ್ತು ಕನಿಷ್ಠ ₹ 1 ಕೋಟಿ ದಂಡವಿಧಿಸಲು ಅವಕಾಶವಿರುವಂತೆ ಕಾಯ್ದೆ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಕುರಿತ ಮಸೂದೆ ಸೋಮವಾರ ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಸಿಬ್ಬಂದಿ ಮತ್ತು ಆಡಳಿತದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಸೂದೆ ಮಂಡಿಸುವರು. ‘ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ಮಸೂದೆ 2024’ಯಲ್ಲಿ 20 ಪರೀಕ್ಷಾಅಕ್ರಮಗಳನ್ನು ಉಲ್ಲೇಖಿಸಿದೆ. 

ADVERTISEMENT

ನಕಲಿ ಅಭ್ಯರ್ಥಿಗಳ ಹಾಜರಿ, ಉತ್ತರ ಪತ್ರಿಕೆಗಳ ನಕಲು, ದಾಖಲೆಗಳನ್ನು ತಿರುಚುವುದು, ಮೆರಿಟ್‌ ಪಟ್ಟಿ ಸಿದ್ಧಪಡಿಸುವಲ್ಲಿ ಅಕ್ರಮ ಎಸಗುವುದು, ಉದ್ದೇಶಪೂರ್ವಕವಾಗಿ ಭದ್ರತಾ ವ್ಯವಸ್ಥೆ ಉಲ್ಲಂಘನೆ, ಪರೀಕ್ಷಾರ್ಥಿಗಳಿಗೆ ಸೀಟು ನಿಗದಿಪಡಿಸುವಲ್ಲಿ ಅಕ್ರಮ ಎಸಗುವುದು, ಉದ್ದೇಶಪೂರ್ವಕವಾಗಿನಿಯಮಗಳನ್ನು ಉಲ್ಲಂಘಿಸುವ ಕ್ರಮವನ್ನು ಪರೀಕ್ಷಾ ಅಕ್ರಮಗಳೆಂದು ಹೊಸ ಮಸೂದೆಯಡಿ ಪರಿಗಣಿಸಲಾಗುತ್ತದೆ.

ತಪ್ಪಿತಸ್ಥರು ಸಂಘಟಿತ ಅಪರಾಧಗಳಲ್ಲಿ ತೊಡಿಗಿರುವುದು ದೃಢಪಟ್ಟಲ್ಲಿ ಕನಿಷ್ಠ 5 ರಿಂದ 10 ವರ್ಷ ಸಜೆ, ₹ 1 ಕೋಟಿ ಮೀರದಂತೆ ದಂಡ ವಿಧಿಸಲು ಅವಕಾಶವಿದೆ. ಶಿಕ್ಷಣ ಸಂಸ್ಥೆಗಳೇ ಅಕ್ರಮಗಳಲ್ಲಿ ತೊಡಗಿದ್ದರೆ ಆಸ್ತಿಯ ಜಪ್ತಿ ಜೊತೆಗೆ, ಪರೀಕ್ಷಾ ವೆಚ್ಚ ವಸೂಲಿಗೂ ಕ್ರಮ ಕೈಗೊಳ್ಳ
ಲಾಗುತ್ತದೆ. ಸಂಘಟಿತ ಅಪರಾಧದ ಪಾತ್ರ ಇಲ್ಲದಿದ್ದರೆ, 3 ರಿಂದ 5 ವರ್ಷ ಸಜೆ ಹಾಗೂ ₹ 10 ಲಕ್ಷವರೆಗೂ ದಂಡ ವಿಧಿಸಲು ಅವಕಾಶವಿದೆ.

ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಸೋರಿಕೆ ಪ್ರಕರಣಗಳ ವಿರುದ್ಧ ಇತ್ತೀಚೆಗೆ ರಾಜಸ್ಥಾನ, ಗುಜರಾತ್, ತೆಲಂಗಾಣ, ಮಧ್ಯಪ್ರದೇಶ ರಾಜ್ಯಗಳಲ್ಲಿ ಉದ್ಯೋಗಾಕಾಂಕ್ಷಿ ಪರೀಕ್ಷಾರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಲೋಕಸಭೆಯ ಕಲಾಪ ಸಲಹಾ ಸಮಿತಿಯು (ಬಿಎಸಿ), ಈ ಮಸೂದೆಗೆ ಈ ಅಧಿವೇಶನದಲ್ಲಿಯೇ ಅಂಗೀಕಾರ ಸಿಗುವುದು ಅಗತ್ಯ. ಸಿಗದಿದ್ದರೆ ಪ್ರಸಕ್ತ ಲೋಕಸಭೆಯ ಅವಧಿಯೇ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ, ನಂತರ ಮಸೂದೆ ರದ್ದುಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.