ADVERTISEMENT

ಒಂದೇ ಹೆಸರಿನ ಇಬ್ಬರಿಗೆ ಪದ್ಮಶ್ರೀ ಪ್ರಶಸ್ತಿ: ಒಡಿಶಾ ಹೈಕೋರ್ಟ್‌ನಿಂದ ನೋಟಿಸ್!

ಪಿಟಿಐ
Published 12 ಫೆಬ್ರುವರಿ 2025, 7:22 IST
Last Updated 12 ಫೆಬ್ರುವರಿ 2025, 7:22 IST
<div class="paragraphs"><p>ಒಡಿಶಾ ಹೈಕೋರ್ಟ್‌</p></div>

ಒಡಿಶಾ ಹೈಕೋರ್ಟ್‌

   

ಕಟಕ್: 2023ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವುದಾಗಿ ಹೇಳಿಕೊಂಡಿರುವ ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳಿಗೆ ಫೆಬ್ರುವರಿ 24ರಂದು ವಿಚಾರಣೆಗೆ ಹಾಜರಾಗುವಂತೆ ಒಡಿಶಾ ಹೈಕೋರ್ಟ್‌ ನೋಟಿಸ್ ಜಾರಿ ಮಾಡಿದೆ.

2023ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಒಡಿಶಾದ ‘ಶ್ರೀ ಅಂತರ್ಯಾಮಿ ಮಿಶ್ರಾ’ ಎಂಬ ಹೆಸರು 56ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ADVERTISEMENT

ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅಂತರ್ಯಾಮಿ ಮಿಶ್ರಾ ಅವರು ನವದೆಹಲಿಗೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದಾದ ಕೆಲವು ದಿನಗಳ ಬಳಿಕ ವೈದ್ಯರಾಗಿರುವ ಡಾ.ಅಂತರ್ಯಾಮಿ ಮಿಶ್ರಾ ಅವರು ತಮ್ಮ ಹೆಸರನ್ನು ಅನುಕರಿಸುವ ಮೂಲಕ ಅಂತರ್ಯಾಮಿ ಮಿಶ್ರಾ ಅವರು ಪ್ರಶಸ್ತಿ ಪಡೆದಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಅಂತರ್ಯಾಮಿ ಮಿಶ್ರಾ ಅವರು ಒಡಿಯಾ ಮತ್ತು ಇತರ ಭಾರತೀಯ ಭಾಷೆಗಳಲ್ಲಿ 29 ಪುಸ್ತಕಗಳನ್ನು ಬರೆದಿರುವುದಾಗಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಅವರ ಹೆಸರನ್ನು 2023ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ, ಅಂತರ್ಯಾಮಿ ಮಿಶ್ರಾ ಅವರು ಯಾವುದೇ ಪುಸ್ತಕಗಳನ್ನು ಬರೆದಿಲ್ಲ ಎಂದು ಡಾ.ಅಂತರ್ಯಾಮಿ ಮಿಶ್ರಾ ಪರ ವಕೀಲರು ವಾದಿಸಿದ್ದಾರೆ.

‘ಸರ್ಕಾರದ ಕಠಿಣ ಪರಿಶೀಲನಾ ಪ್ರಕ್ರಿಯೆಯ ಹೊರತಾಗಿಯೂ, ಒಂದೇ ರೀತಿಯ ಹೆಸರುಗಳಿಂದಾಗಿ ಗೊಂದಲ ಸೃಷ್ಟಿಯಾಗಿದ್ದು, ಆಯ್ಕೆ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಬಗ್ಗೆ ಕಳವಳ ಉಂಟುಮಾಡಿದೆ’ ಎಂದು ನ್ಯಾಯಮೂರ್ತಿ ಎಸ್. ಕೆ. ಪಾಣಿಗ್ರಾಹಿ ಹೇಳಿದ್ದಾರೆ.

ಫೆಬ್ರುವರಿ 24ರಂದು ಇಬ್ಬರೂ ಹಕ್ಕುದಾರರು ಎಲ್ಲಾ ಪ್ರಕಟಣೆಗಳು ಮತ್ತು ಸಾಮಗ್ರಿಗಳೊಂದಿಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಿರುವ ನ್ಯಾಯಾಧೀಶರು, ಈ ವಿಷಯದ ಬಗ್ಗೆ ಭಾರತ ಒಕ್ಕೂಟ ಸೇರಿದಂತೆ ಪ್ರತಿವಾದಿಗಳಿಗೂ ನೋಟಿಸ್ ಜಾರಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.