ADVERTISEMENT

ಬಡವರು, ವಂಚಿತ ವರ್ಗಗಳ ಸಬಲೀಕರಣ ಬಿಜೆಪಿಯ ಆದ್ಯತೆ: ಪ್ರಧಾನಿ ನರೇಂದ್ರ ಮೋದಿ

ಪಿಟಿಐ
Published 25 ಡಿಸೆಂಬರ್ 2023, 13:12 IST
Last Updated 25 ಡಿಸೆಂಬರ್ 2023, 13:12 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

-ಪಿಟಿಐ ಚಿತ್ರ

ಇಂದೋರ್‌: ಸಮಾಜದಲ್ಲಿನ ಬಡವರು ಮತ್ತು ವಂಚಿತ ವರ್ಗಗಳನ್ನು ಗೌರವಿಸುವುದು ಹಾಗೂ ಸಬಲೀಕರಣಗೊಳಿಸುವುದು ಬಿಜೆಪಿ ಸರ್ಕಾರದ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ADVERTISEMENT

ಮಧ್ಯಪ್ರದೇಶದ ಇಂದೋರ್‌ ನಗರದ ಹುಕುಮ್‌ಚಂದ್‌ ಮಿಲ್‌ ಕಾರ್ಮಿಕರಿಗೆ ಸೇರಿದ ₹224 ಕೋಟಿ ಬಾಕಿ ವಿತರಣೆಗೆ ಆಯೋಜಿಸಲಾಗಿದ್ದ 'ಮಜ್ದೂರನ್ ಕಾ ಹಿತ್, ಮಜ್ದೂರನ್ ಕೋ ಸಮರ್ಪಿತ್' ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮೋದಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದರು.

ಕಾರ್ಮಿಕರಿಗೆ ಸೇರಿದ ಬಾಕಿ ಹಣವನ್ನು ವರ್ಚುವಲ್‌ ಕಾರ್ಯಕ್ರಮದ ಮೂಲಕ ಮೋದಿ ವಿತರಿಸಿದರು. ಬಾಕಿ ಪಾವತಿಯಿಂದಾಗಿ 4,800 ಕಾರ್ಮಿಕರು ಪ್ರಯೋಜನ ಪಡೆಯಲಿದ್ದಾರೆ ಎಂದು ಅವರು ತಿಳಿಸಿದರು.

‘ಬಡವರು, ಯುವಕರು, ಮಹಿಳೆಯರು ಮತ್ತು ರೈತರು ನನಗೆ ದೊಡ್ಡ ನಾಲ್ಕು ಜಾತಿಗಳಾಗಿವೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಬಡವರು ಮತ್ತು ವಂಚಿತರನ್ನು ಗೌರವಿಸುವುದು ಹಾಗೂ ಸಬಲೀಕರಣಗೊಳಿಸುವುದು ನಮ್ಮ (ಬಿಜೆಪಿ) ಆದ್ಯತೆಯಾಗಿದೆ’ ಎಂದು ಮೋದಿ ಹೇಳಿದರು.

‘ಬಿಜೆಪಿಯ ‘ಡಬಲ್‌ ಎಂಜಿನ್‌’ ಸರ್ಕಾರದ ಅವಧಿಯಲ್ಲಿ (ಕೇಂದ್ರ ಮತ್ತು ಮಧ್ಯಪ್ರದೇಶ) ಇಂದೋರ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಕೋಟಿಗಳ ಹೂಡಿಕೆ ಮಾಡಲಾಗಿದೆ. ಇದು ಸಾವಿರಾರು ಉದ್ಯೋಗಾವಕಾಶಗಳನ್ನು ನೀಡಿವೆ’ ಎಂದು ಅವರು ತಿಳಿಸಿದರು.

ಬಹುಕಾಲದಿಂದ ಬಾಕಿ ಉಳಿದಿದ್ದ ಈ ಸಮಸ್ಯೆಯನ್ನು ಪರಿಹರಿಸಿದ್ದಕ್ಕಾಗಿ ರಾಜ್ಯ ಸರ್ಕಾರವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಬಡವರ ಜೀವನವನ್ನು ಪರಿವರ್ತಿಸಲು ಮಧ್ಯಪ್ರದೇಶ ಸರ್ಕಾರವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದರು.

1992ರಲ್ಲಿ ಇಂದೋರ್‌ನಲ್ಲಿನ ಗಿರಣಿ ಮುಚ್ಚಿದ ನಂತರ ಹುಕುಮ್‌ಚಂದ್ ಮಿಲ್‌ನ ಕಾರ್ಮಿಕರು ತಮ್ಮ ಬಾಕಿ ಪಾವತಿಗಾಗಿ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು. ಮಧ್ಯಪ್ರದೇಶ ಸರ್ಕಾರದ ಉಪಕ್ರಮದ ಮೇರೆಗೆ, ರಾಜ್ಯ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮಂಡಳಿ ಮತ್ತು ಕಾರ್ಮಿಕ ಸಂಘಟನೆಗಳು ಒಪ್ಪಂದಕ್ಕೆ ಸಹಿ ಹಾಕಿದ್ದವು. ಪರಿಹಾರದ ಮೊತ್ತವನ್ನು ಡಿಸೆಂಬರ್‌ನಂದು ಹೈಕೋರ್ಟ್‌ನಲ್ಲಿ ಠೇವಣಿ ಇರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.