ADVERTISEMENT

ಬಿಹಾರದಲ್ಲಿ ಬಿಜೆಪಿ ಜೊತೆ ಮಾತ್ರ ಮೈತ್ರಿ ಎಂದ ಜೆಡಿಯು

ಆಡಳಿತಾರೂಢ ಜೆಡಿಯು ಹಾಗೂ ಎಲ್‌ಜೆಪಿ ನಡುವೆ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 14:04 IST
Last Updated 12 ಆಗಸ್ಟ್ 2020, 14:04 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಬಿಹಾರ ವಿಧಾನಸಭೆಗೆ ನಿಗದಿಯಂತೆಯೇಅಕ್ಟೋಬರ್‌–ನವೆಂಬರ್‌ನಲ್ಲಿ ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದ ಬೆನ್ನಲ್ಲೇ, ಜೆಡಿಯು ಮತ್ತು ಎಲ್‌ಜೆಪಿ ನಡುವೆ ವಾಕ್ಸಮರವೂ ಆರಂಭವಾಗಿದೆ

ಎನ್‌ಡಿಯ ಮೈತ್ರಿಕೂಟದಲ್ಲಿದ್ದರೂ ಬಿಹಾರದಲ್ಲಿ ಮಾತ್ರ ಬಿಜೆಪಿಯೊಂದಿಗೆ ಮಾತ್ರ ಮೈತ್ರಿ ಮಾಡಿಕೊಂಡಿದ್ದೇವೆ. ಎಲ್‌ಜೆಪಿಯೊಂದಿಗೆ ಅಲ್ಲ ಎಂದು ಆಡಳಿತಾರೂಢ ಪಕ್ಷ ಜೆಡಿಯುನ ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಹೇಳಿರುವುದು, ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷಗಳಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಿಂಬಿಸಿದೆ.

ಇನ್ನೊಂದೆಡೆ, ‘ಕಳೆದ 15 ವರ್ಷಗಳಲ್ಲಿ ಬಿಹಾರದಲ್ಲಿ ಏನು ಬದಲಾವಣೆಯಾಗಿದೆ’ ಎಂದು ಸಂಸದ ಹಾಗೂ ಎಲ್‌ಜೆಪಿ ವರಿಷ್ಠ ರಾಮವಿಲಾಸ್‌ ಪಾಸ್ವಾನ್‌ ಪುತ್ರ ಚಿರಾಗ್‌ ಪಾಸ್ವಾನ್‌ ಇತ್ತೀಚೆಗೆ ಪ್ರಶ್ನಿಸಿದ್ದರು. ಕೋವಿಡ್‌–19 ಹಿನ್ನೆಲೆಯಲ್ಲಿ ವಿಧಾನಸಭೆ ಚುನಾವಣೆಯನ್ನು ಮುಂದೂಡಬೇಕು ಎಂದು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಆಗ್ರಹಿಸಿದ್ದರು. ಈ ಹೇಳಿಕೆಗೆ ಚಿರಾಗ್‌ ಸಹಮತ ವ್ಯಕ್ತಪಡಿಸಿದ್ದರು. ಇದು ಸಹ ಜೆಡಿಯು ತೀಕ್ಷ್ಣವಾಗಿ ಪ್ರತಿಕ್ರಿಯಿಸಲು ಕಾರಣ ಎನ್ನಲಾಗುತ್ತಿದೆ.

ADVERTISEMENT

ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗಲೂ ಚಿರಾಗ್‌ ಪಾಸ್ವಾನ್‌ ಅವರು ಮುಖ್ಯಮಂತ್ರಿ ನಿತೀಶ್‌ ಕುಮಾರ್ ವಿರುದ್ಧ ಹರಿಹಾಯ್ದಿದ್ದರು. ಕಾರ್ಮಿಕರ ಸಮಸ್ಯೆ ನಿಭಾಯಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿಯವರಿಂದ ನಿತೀಶ್‌ ಪಾಠ ಕಲಿಯಬೇಕು ಎಂದಿದ್ದ ಚಿರಾಗ್‌, ಪಡಿತರ ಚೀಟಿ ವಿತರಣೆ ವಿಷಯದಲ್ಲಿಯೂ ಸರ್ಕಾರ ಎಡವಿದೆ ಎಂದು ಟೀಕಿಸಿದ್ದರು.

‘ಬಿಹಾರದಲ್ಲಿ ನಿತೀಶ್‌ಕುಮಾರ್‌ ಅವರೇ ಎನ್‌ಡಿಎ ಮೈತ್ರಿಕೂಟದ ವಿವಾದಾತೀತ ನಾಯಕ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಹಾಗೂ ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿ ವರಿಷ್ಠರೇ ಅನೇಕ ಬಾರಿ ಹೇಳಿದ್ದಾರೆ. ಈಗ ನಿತೀಶ್‌ ವಿರುದ್ಧ ಬೆರಳು ತೋರಲು ಎಲ್‌ಜೆಪಿ ಮುಖಂಡ ಯಾರು? ಈತ ಮೋದಿ ಅಥವಾ ಶಾಗಿಂತ ದೊಡ್ಡ ವ್ಯಕ್ತಿಯೇ’ ಎಂದೂ ತ್ಯಾಗಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.