ADVERTISEMENT

ಪೆರೋಲ್ ಮೇಲೆ ಜೈಲಿನಿಂದ ಹೊರಗಿರುವ ಗುರ್ಮಿತ್ ಪ್ರವಚನಕ್ಕೆ ಹಾಜರಾದ ಬಿಜೆಪಿ ನಾಯಕರು

ಪಿಟಿಐ
Published 20 ಅಕ್ಟೋಬರ್ 2022, 14:52 IST
Last Updated 20 ಅಕ್ಟೋಬರ್ 2022, 14:52 IST
ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್ 
ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್    

ಕರ್ನಾಲ್ (ಹರಿಯಾಣ): ಪ್ರಸ್ತುತ ಪೆರೋಲ್ ಮೇಲೆ ಹೊರಗಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂ ಸಿಂಗ್ ಅವರ ಆನ್‌ಲೈನ್ ಪ್ರವಚನಕ್ಕೆ ಹರಿಯಾಣದ ಬಿಜೆಪಿ ನಾಯಕರು ಹಾಜರಾಗಿದ್ದಾರೆ.

ಅ. 14ರಂದು 40 ದಿನಗಳ ಮಟ್ಟಿಗೆ ಪೆರೋಲ್‌ನಲ್ಲಿ ಬಿಡುಗಡೆಯಾಗಿರುವ ಗುರ್ಮಿತ್ ಸಿಂಗ್ ಬರ್ನಾವಾದ ಆಶ್ರಮಕ್ಕೆ ತೆರಳಿದ್ದು ಅಲ್ಲಿಂದಲೇ ಆನ್‌ಲೈನ್ ಪ್ರವಚನ ಮಾಡುತ್ತಿದ್ದಾರೆ.

ಹರಿಯಾಣ ವಿಧಾನಸಭಾದ ಡೆಪ್ಯುಟಿ ಸ್ಪೀಕರ್ ರಣಬೀರ್ ಗಂಗ್ವಾ ಅವರು ಬುಧವಾರ ಆನ್‌ಲೈನ್ ಪ್ರವಚನ ಕೇಳಲು ಹಾಜರಾಗಿದ್ದರು. ಮಂಗಳವಾರಕರ್ನಾಲ್ ಮೇಯರ್ ರೇಣು ಬಾಲಾ ಕೂಡಾ ಬಿಜೆಪಿಯ ಕೆಲ ನಾಯಕರೊಂದಿಗೆ ಆನ್‌ಲೈನ್ ಸತ್ಸಂಗದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರವಚನದಲ್ಲಿ ಮಾತನಾಡಿರುವ ರಣಬೀರ್, ಡೇರಾದ ಮುಖ್ಯಸ್ಥರ ಆಶೀರ್ವಾದದಿಂದ ತಾವು ಸಂತೋಷಗೊಂಡಿದ್ದು, ಮುಂದಿನ ದಿನಗಳಲ್ಲಿ ಮುಖಾಮುಖಿಯಾಗಿ ಭೇಟಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೇಯರ್ ರೇಣು ಅವರು, ಡೇರಾ ಮುಖ್ಯಸ್ಥರನ್ನು ‘ಪಿತಾಜಿ’ (ತಂದೆ) ಎಂದು ಸಂಬೋಧಿಸಿದ್ದು, ಅವರ ಆಶೀರ್ವಾದ ಸದಾ ತಮ್ಮ ಮೇಲೆ ಇರಬೇಕೆಂದು ಕೋರಿದ್ದಾರೆ.

ಹರಿಯಾಣದಲ್ಲಿ ಪಂಚಾಯಿತಿ ಚುನಾವಣೆ ಹಾಗೂ ಅದಮ್‌ಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮುಂದಿನ ತಿಂಗಳು ನಡೆಯುತ್ತಿದ್ದು, ಚುನಾವಣೆಗೆ ಮುನ್ನವೇ ಗುರ್ಮಿತ್ ಸಿಂಗ್ ಬಿಡುಗಡೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆಯೂ ಪಂಜಾಬ್ ವಿಧಾನಭಾ ಚುನಾವಣೆಗೂ ಎರಡು ವಾರಗಳ ಮುನ್ನವೇ ಗುರ್ಮಿತ್ ಸಿಂಗ್ ‘ಫರ್ಲೊ’ (ದೀರ್ಘಾವಧಿ ಶಿಕ್ಷೆಗೆ ಒಳಗಾದವರನ್ನು ಕೆಲ ದಿನಗಳ ಮಟ್ಟಿಗೆ ಬಿಡುಗಡೆ ಮಾಡುವುದು) ಮೇರೆಗೆ ಮೂರುವಾರ ಕಾಲದ ಮಟ್ಟಿಗೆ ಬಿಡುಗಡೆಯಾಗಿದ್ದರು. ಹರಿಯಾಣ, ಪಂಜಾಬ್, ಉತ್ತರಪ್ರದೇಶ ಮತ್ತು ರಾಜಸ್ಥಾನದಲ್ಲಿ ಡೇರಾ ಸಚ್ಚಾ ಸೌದಾದ ಸಿರ್ಸಾ ಆಶ್ರಮದ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಆನ್‌ಲೈನ್ ಪ್ರವಚನಕ್ಕೆ ಹಾಜರಾಗಿರುವ ಕುರಿತು ಗುರುವಾರ ಪ್ರತಿಕ್ರಿಯಿಸಿರುವಡೆಪ್ಯುಟಿ ಸ್ಪೀಕರ್ ರಣಬೀರ್ ಗಂಗ್ವಾ ‘ಪ್ರವಚನಕ್ಕೆ ಹಾಜರಾಗಿರುವುದಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ. ದಶಕಗಳಿಂದ ನಮ್ಮ ಕುಟುಂಬ ಅವರೊಂದಿಗೆ ಸಂಪರ್ಕದಲ್ಲಿದೆ. ಇದು ನಮ್ಮ ವೈಯಕ್ತಿಕ ನಂಬಿಕೆಗಳ ವಿಷಯವಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.