ADVERTISEMENT

ಐಐಟಿ-ಗುವಾಹಟಿಯಲ್ಲಿ ಸಿಬ್ಬಂದಿ ಸೇರಿ 50 ಜನರಿಗೆ ಕೋವಿಡ್ ದೃಢ, ನಿರ್ಬಂಧ ಜಾರಿ

ಪಿಟಿಐ
Published 5 ಜನವರಿ 2022, 9:29 IST
Last Updated 5 ಜನವರಿ 2022, 9:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುವಾಹಟಿ: ಕಳೆದ ಆರು ದಿನಗಳಲ್ಲಿ ಐಐಟಿ-ಗುವಾಹಟಿಯಲ್ಲಿ ವಿದ್ಯಾರ್ಥಿಗಳು ಮತ್ತು ಬೋಧನಾ ಸಿಬ್ಬಂದಿ ಸೇರಿ 50 ಜನರಿಗೆ ಕೋವಿಡ್ ದೃಢಪಟ್ಟಿದ್ದು, ಕ್ಯಾಂಪಸ್‌ನಲ್ಲಿ ಬಿಗಿ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಸೋಂಕಿತರಲ್ಲಿ ಶೇ 99ರಷ್ಟು ಮಂದಿ ರಜೆಯ ಬಳಿಕ ಅಸ್ಸಾಂನ ಹೊರಗಿಂದ ಕಾಲೇಜಿಗೆ ಹಿಂತಿರುಗಿದ್ದರು ಎಂದು ಡೀನ್ ಪಿಆರ್ ಪರಮೇಶ್ವರ್ ಐಯ್ಯರ್ ತಿಳಿಸಿದ್ದಾರೆ.

ಡಿಸೆಂಬರ್ 31ರಿಂದೀಚೆಗೆ 50ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಕ್ಯಾಂಪಸ್‌ನಲ್ಲಿ ಪತ್ತೆಯಾಗಿವೆ. ಈ ಪೈಕಿ ಬೋಧನಾ ಸಿಬ್ಬಂದಿ ಮತ್ತು ಅವರ ಕುಟುಂಬದ ಐವರಿಗೆ ಹಾಗೂ ಮತ್ತೋರ್ವ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಉಳಿದವರು ವಿದ್ಯಾರ್ಥಿಗಳು ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ಬೋಧನಾ ಸಿಬ್ಬಂದಿಯ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಾಗಿದ್ದು, ಗುವಾಹಟಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದೆಲ್ಲರನ್ನು ಕ್ಯಾಂಪಸ್‌ನಲ್ಲಿರುವ ಅತಿಥಿ ಗೃಹದಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

'ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ಪರೀಕ್ಷಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ಜಿಲ್ಲಾಡಳಿತವು ಹೆಚ್ಚಿನ ನೆರವನ್ನು ನೀಡಿದೆ. ಹಾಸ್ಟೆಲ್‌ಗಳಲ್ಲಿ ನಿರ್ಬಂಧ ವಿಧಿಸಲಾಗಿದ್ದು, ವಿದ್ಯಾರ್ಥಿಗಳು ಅಲ್ಲಿಂದ ತೆರಳುವಾಗ ಅನುಮತಿ ಪಡೆಯುವುದು ಅಗತ್ಯವಾಗಿದೆ. ಮುಂದಿನ ಆದೇಶದವರೆಗೂ ಬೇರೆ ವಿದ್ಯಾರ್ಥಿಗಳಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.