ADVERTISEMENT

2018-20ರ ಅವಧಿ: ರಸ್ತೆಗಳಲ್ಲಿನ ಗುಂಡಿಗಳಿಂದಾಗಿ ಭಾರತದಲ್ಲಿ 5,626 ಜನ ಸಾವು!

2018ರಿಂದ 20ರ ಅವಧಿಯಲ್ಲಿ ಸಂಭವಿಸಿದ ಅಪಘಾತ ಪ್ರಕರಣಗಳು

ಪಿಟಿಐ
Published 22 ಆಗಸ್ಟ್ 2022, 15:52 IST
Last Updated 22 ಆಗಸ್ಟ್ 2022, 15:52 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ‘2018–20ರ ಅವಧಿಯಲ್ಲಿ ರಸ್ತೆಗಳಲ್ಲಿನ ಗುಂಡಿಗಳಿಂದಾಗಿ ಅಪಘಾತಕ್ಕೀಡಾಗಿ 5,626 ಜನರು ಸಾವಿಗೀಡಾಗಿದ್ದಾರೆ’ ಎಂದು ಕೇಂದ್ರ ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನೀಡಿರುವ ಮಾಹಿತಿಯ ಪ್ರಕಾರ, 2018ರಲ್ಲಿ 2,015, 2019ರಲ್ಲಿ 2,140 ಹಾಗೂ 2020ರಲ್ಲಿ 1,471 ಮಂದಿ ಸಾವಿಗೀಡಾಗಿದ್ದಾರೆ.

‘ರಸ್ತೆ ಸುರಕ್ಷತೆಯ ಸಮಸ್ಯೆಯನ್ನು ಪರಿಹರಿಸಲು ರಸ್ತೆ ಮತ್ತು ವಾಹನಗಳು ಎರಡನ್ನೂ ಗಮನದಲ್ಲಿರಿಸಿಕೊಂಡು ಸಚಿವಾಲಯವು ಬಹುಮುಖಿ ಕಾರ್ಯತಂತ್ರವನ್ನು ರೂಪಿಸಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಹೇಳಿದ್ದರು.

ADVERTISEMENT

‘ಕಡಿದಾದ ತಿರುವು, ಗುಂಡಿಗಳು ಮತ್ತು ಎತ್ತರದಲ್ಲಿರುವ ರಸ್ತೆಗಳಲ್ಲಿ ಸಂಚರಿಸಲು ವಾಹನ ಸವಾರರಿಗೆ ಹೆಚ್ಚಿನ ಕೌಶಲದ ಅವಶ್ಯಕತೆ ಮತ್ತು ಜಾಗರೂಕತೆಯ ಅಗತ್ಯವಿರುತ್ತದೆ. ರಸ್ತೆ ಅಪಘಾತಕ್ಕೆ ಹಲವು ಕಾರಣಗಳಿರುತ್ತವೆ. ಅದರಲ್ಲಿ ಅತಿಯಾದ ವೇಗ, ಆಟೊಮೊಬೈಲ್‌ನ ವಿನ್ಯಾಸ, ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸುವುದು, ಮದ್ಯಪಾನ ಇಲ್ಲವೇ ಮಾದಕ ವಸ್ತು ಸೇವಿಸಿ ವಾಹನ ಚಲಾಯಿಸುವುದು, ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚಿನ ಸರಕು ಒಯ್ಯುವುದು, ವಾಹನದ ಸ್ಥಿತಿ, ಮಂದ ಬೆಳಕು ಇವೆಲ್ಲವೂ ಅಪಘಾತಕ್ಕೆ ಕಾರಣವಾಗಬಲ್ಲವು’ ಎಂದು ಸಚಿವರು ಹೇಳಿದ್ದರು.

ಇವುಗಳ ಜತೆಗೆ, ‘ಸಿಗ್ನಲ್‌ನಲ್ಲಿ ಕೆಂಪು ದೀಪವಿದ್ದರೂ ಅದನ್ನು ಉಲ್ಲಂಘಿಸಿ ವಾಹನ ಚಲಾಯಿಸುವುದು, ಓವರ್ ಟೇಕ್ ಮಾಡುವುದು, ಕೆಟ್ಟ ಹವಾಮಾನ, ಚಾಲಕನಿಂದಾಗುವ ತಪ್ಪಿನ ಜತೆಗೆ ರಸ್ತೆಗಳಲ್ಲಿರುವ ಅವ್ಯವಸ್ಥೆ, ಪಾದಚಾರಿಗಳು ಅಡ್ಡಬರುವುದು ಕೂಡಾ ರಸ್ತೆ ಅಪಘಾತ ಸಂಭವಿಸಲು ಕಾರಣವಾಗಬಹುದು’ ಎಂದೂ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

‘ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಕಪ್ಪು ಚುಕ್ಕೆಗಳಾಗಿರುವ ಅಪಘಾತ ಪೀಡಿತ ತಾಣಗಳನ್ನು ಗುರುತಿಸಲು ಮತ್ತು ಅವುಗಳನ್ನು ಸರಿಪಡಿಸಲು ಆದ್ಯತೆ ನೀಡಲಾಗುತ್ತಿದೆ. ಯೋಜನೆಯ ಹಂತದಲ್ಲಿಯೇ ರಸ್ತೆ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ರಸ್ತೆ ವಿನ್ಯಾಸ ಸೂಕ್ತವಾಗಿ ಮಾಡಲು ಗಮನ ಹರಿಸಲಾಗುವುದು’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.