ADVERTISEMENT

ಮಣಿಪುರದಲ್ಲಿನ ಸೇನಾ ನೆಲೆಯಲ್ಲಿ ಭೂಕುಸಿತ: 7 ಜನರ ಶವ ಪತ್ತೆ, 45 ಮಂದಿ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 10:45 IST
Last Updated 30 ಜೂನ್ 2022, 10:45 IST
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ (ಪಿಟಿಐ ಚಿತ್ರ)
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ (ಪಿಟಿಐ ಚಿತ್ರ)   

ಇಂಫಾಲ (ಮಣಿಪುರ):ನೋನಿ ಜಿಲ್ಲೆಯ ತುಪುಲ್‌ ರೈಲು ನಿಲ್ದಾಣದ ಸಮೀಪ ಇರುವ ಸೇನಾ ಶಿಬಿರದಲ್ಲಿ ಬುಧವಾರ ರಾತ್ರಿ ಭಾರಿ ಭೂಕುಸಿತ ಸಂಭವಿಸಿದೆ. ದುರಂತದಲ್ಲಿ, ಯೋಧರೂ ಸೇರಿದಂತೆ ಒಟ್ಟು 52 ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ 7 ಜನರ ಶವಗಳನ್ನು ಹೊರತೆಗೆಯಲಾಗಿದ್ದು, ಇನ್ನೂ 45 ಮಂದಿಗಾಗಿ ಕಾರ್ಯಾಚರಣೆ ನಡೆಯುತ್ತಿದೆ.

ಇದುವರೆಗೆ 7 ಮಂದಿ ಶವಗಳನ್ನು ಹೊರತೆಗೆಯಲಾಗಿದೆ. ರಕ್ಷಿಸಲ್ಪಟ್ಟ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 45 ಮಂದಿ ನಾಪತ್ತೆಯಾಗಿದ್ದಾರೆ ಎಂದು ನೋನಿ ಜಿಲ್ಲೆಯ ಉಪ ವಿಭಾಗೀಯ ಅಧಿಕಾರಿ ಸೋಲೊಮನ್‌ ಎಲ್‌ ಫಿಮೇಟ್‌ ತಿಳಿಸಿರುವುದಾಗಿಎಎನ್‌ಐ ಟ್ವೀಟ್‌ ಮಾಡಿದೆ.

ಜಿರಿಬಾಮ್‌–ಇಂಫಾಲ ರೈಲು ಮಾರ್ಗ ಕಾಮಗಾರಿ ಪ್ರಗತಿಯಲ್ಲಿದ್ದು, ಅದರ ರಕ್ಷಣೆ ಸಲುವಾಗಿ ತುಪುಲ್‌ ರೈಲು ನಿಲ್ದಾಣದ ಸಮೀಪ ನಿಯೋಜಿಸಲಾಗಿದ್ದ ಭಾರತೀಯ ಸೇನೆಯ 107ನೇ ಪ್ರಾದೇಶಿಕ ತುಕಡಿ ಶಿಬಿರ ಇರುವ ಪ್ರದೇಶದಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಯೋಜನೆಗೆ ರೈಲ್ವೆ ನಿಯೋಜಿಸಿದ್ದ ನೌಕರರೂ ಮಣ್ಣಿನಡಿ ಸಿಲುಕಿದ್ದಾರೆ.

ADVERTISEMENT

ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೃಹತ್‌ ಗಾತ್ರದ ಬಂಡೆ ಮತ್ತು ಮಣ್ಣು ಸೇನಾ ನೆಲೆ ಮೇಲೆ ಕುಸಿದಿದೆ. ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಆದರೆ, ವಾತಾವರಣ ಪೂರಕವಾಗಿಲ್ಲ. 'ಸಾಕಷ್ಟು ಮಣ್ಣು ಮತ್ತು ಕೆಸರು ತುಂಬಿಕೊಂಡಿದೆ. ಅಲ್ಲಿಗೆ (ಘಟನಾ ಸ್ಥಳಕ್ಕೆ) ತಲುಪಲು ಸರಿಯಾದ ರಸ್ತೆ ಮಾರ್ಗವಿಲ್ಲ. ಆದರೂ, ಕಾಣೆಯಾದವರ ಪತ್ತೆಗಾಗಿ ನಿರಂತರ ಪ್ರಯತ್ನ ಮುಂದುವರಿಸಿದ್ದೇವೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಗಾಯಾಳುಗಳಿಗೆ ನೋನಿಯಲ್ಲಿರುವ ಸೇನೆಯ ವೈದ್ಯಕೀಯ ಘಟಕ ಚಿಕಿತ್ಸೆ ನೀಡುತ್ತಿದೆ. ಗಂಭೀರವಾಗಿ ಗಾಯಗೊಂಡಿರುವವರನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಭೂಕುಸಿತದಿಂದಾಗಿಇಜೈ ನದಿ ಹರಿವಿಗೂ ಅಡಚಣೆಯಾಗಿದೆ.ವಾತಾವರಣ ಪೂರಕವಾಗಿಲ್ಲದಿರುವುದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹವಾಮಾನ ಸುಧಾರಿಸಿದರೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಸೇನೆಯ ಹೆಲಿಕಾಪ್ಟರ್‌ಗಳೂ ಸಜ್ಜಾಗಿವೆ' ಎಂದು ನೆರೆಯನಾಗಾಲ್ಯಾಂಡ್‌ನ ಕೋಹಿಮಾದಲ್ಲಿ ನಿಯೋಜನೆಯಾಗಿರುವ ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನಂಟ್‌ ಕರ್ನಲ್‌ ಸುಮಿತ್‌ ಶರ್ಮಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಅವರು ಗುರುವಾರ ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸೇನೆ, ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ದಳ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವುದನ್ನು ಪರಿಶೀಲಿಸಿದ್ದಾರೆ. ಮೃತರ ಕುಟುಂಬದವರಿಗೆ ₹ 5 ಲಕ್ಷ ಹಾಗೂಗಾಯಗೊಂಡವರಿಗೆ ₹ 50 ಸಾವಿರ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.