ADVERTISEMENT

ಅರಣ್ಯ ಹಕ್ಕು ಕಾಯ್ದೆ: ಸ್ಪಷ್ಟನೆ ಕೋರಿ ಪ್ರಧಾನಿ ಮೋದಿಗೆ ಪತ್ರ

ಪಿಟಿಐ
Published 30 ಜೂನ್ 2025, 16:10 IST
Last Updated 30 ಜೂನ್ 2025, 16:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಪರಿಸರ ಸಚಿವಾಲಯ ‘ ಅರಣ್ಯ ಹಕ್ಕು ಕಾಯ್ದೆ (ಎಫ್‌ಆರ್‌ಎ)’ಯನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ 90ಕ್ಕೂ ಹೆಚ್ಚು ಅರಣ್ಯ ಹಕ್ಕು ಸಂಘಟನೆಗಳು, ಅರಣ್ಯ ಒತ್ತುವರಿ ಕುರಿತು ತಾವು ನೀಡಿರುವ ಹೇಳಿಕೆ ಬಗ್ಗೆ ಕೂಡಲೇ ಸಚಿವ ಭೂಪೇಂದ್ರ ಯಾದವ್ ಅವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿವೆ.

‘ಅರಣ್ಯ ಹಕ್ಕು ಕಾಯ್ದೆ ಅಡಿ ನೀಡಿರುವ ಹಕ್ಕುಪತ್ರಗಳು ಅರಣ್ಯ ಒತ್ತುವರಿಗೆ ಕಾರಣ’ ಎಂದು ಜೂನ್ 5ರಂದು ಯಾದವ್‌ ‌ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಂಬಂಧ ಸ್ಪಷ್ಟನೆ ಬಯಸಿ ಜೂನ್‌ 28ರಂದು ಪತ್ರ ಬರೆದಿರುವುದಾಗಿ ಛತ್ತೀಸಗಢ ಬಚಾವೋ ಆಂದೋಲನ ಮತ್ತು ಹಿಮಾಚಲ ಪ್ರದೇಶದ ಹಿಮಧಾರಾ ಸಂಸ್ಥೆ ಸೇರಿ ಹಲವು ಸಂಘ–ಸಂಸ್ಥೆಗಳು ತಿಳಿಸಿವೆ.

ಅರಣ್ಯ ಸಚಿವರ ಹೇಳಿಕೆ ‌‘ದಾರಿ ತಪ್ಪಿಸುವ, ಕಾನೂನು ಅಡಿ ಸಮರ್ಥನೀಯವಲ್ಲದ, ಅರಣ್ಯ ಹಕ್ಕು ಕಾಯ್ದೆಯ ಔಚಿತ್ಯ ಪ್ರಶ್ನಿಸುವಂತಿದೆ’ ಎಂದು ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.

ADVERTISEMENT

ಅರಣ್ಯ ಅಧಿಕಾರಿಗಳ ಜತೆ ಸೇರಿ ಪರಿಸರ ಇಲಾಖೆಯು ಕಾಯ್ದೆಯನ್ನು ಬುಡಮೇಲು ಮಾಡಲು ಯತ್ನಿಸುತ್ತಲೇ ಇದೆ. 16 ವರ್ಷಗಳಿಂದ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಅಡ್ಡಿ ಮಾಡುತ್ತಿದೆ. ಅರಣ್ಯ ಹಕ್ಕು ಕಾಯ್ದೆಯ ಅಡಿ ಸುಮಾರು 4 ಕೋಟಿ ಹೆಕ್ಟೇರ್‌ ಸಮುದಾಯ ಅರಣ್ಯವು ಗ್ರಾಮ ಮಟ್ಟದ ಸಂಸ್ಥೆಗಳ ಸಂಪನ್ಮೂಲ ಎಂದು 2009ರಲ್ಲಿ ಆಹಾರ ಸಚಿವಾಲಯ ಹೇಳಿತ್ತು. 

‘2023ರಲ್ಲಿ ಲೋಕಸಭೆಗೆ ಮಾಹಿತಿ ನೀಡುವಾಗ ಪರಿಸರ ಸಚಿವರು, ಬುಡಕಟ್ಟು ಜನರು ಮತ್ತು ಅರಣ್ಯ ಹಕ್ಕು ಹೊಂದಿರುವವರು ಅರಣ್ಯ ಒತ್ತುವರಿಗೆ ಕಾರಣ ಎಂದು ಹೇಳಿದ್ದಾರೆ. ಇಲಾಖೆಯೇ 2008ರಿಂದೀಚೆಗೆ ಅರಣ್ಯ ಹಕ್ಕು ಕಾಯ್ದೆ ಉಲ್ಲಂಘಿಸಿ 3 ಲಕ್ಷ ಹೆಕ್ಟೇರ್‌ ಅರಣ್ಯ ಜಮೀನಿನ ಅಕ್ರಮ ಬಳಕೆಗೆ ಅವಕಾಶ ಮಾಡಿಕೊಟ್ಟಿದೆ. ಪ್ರಧಾನಿಯವರು ಮಧ್ಯಪ್ರವೇಶ ಮಾಡಿ ಅರಣ್ಯ ಹಕ್ಕು ಕಾಯ್ದೆಯನ್ನು ಬುಡಮೇಲು ಮಾಡುವ ಪ್ರಯತ್ನ ತಡೆಯಬೇಕು’ ಎಂದು ಮನವಿ ಮಾಡಿವೆ.

ಅರಣ್ಯ ಹಕ್ಕು ಕಾಯ್ದೆ ಜಾರಿವರೆಗೂ ಅರಣ್ಯ ಒತ್ತುವರಿ ಸಂಬಂಧ ಯಾವುದೇ ಕ್ರಮ ಕೈಗೊಳ್ಳದಂತೆ ಪರಿಸರ ಇಲಾಖೆಯು ಸುಪ್ರೀಂಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ (ಎನ್‌ಜಿಟಿ) ಕೂಡಲೇ ಮಾಹಿತಿ ನೀಡಬೇಕು ಎಂದು ಸಂಸ್ಥೆಗಳು ಒತ್ತಾಯಿಸಿವೆ.

ಅರಣ್ಯ ಸಂರಕ್ಷಣಾ ಕಾಯ್ದೆ–1980ಕ್ಕೆ ಸರ್ಕಾರ ತಂದಿರುವ ತಿದ್ದುಪಡಿಗೂ ವಿರೋಧ ವ್ಯಕ್ತಪಡಿಸಿರುವ ಸಂಸ್ಥೆಗಳು, ಭಾರತದ ಅರಣ್ಯ ಮತ್ತು ಜೀವ ವೈವಿಧ್ಯಕ್ಕೆ ಮಾರಕವಾದ ಈ ತಿದ್ದುಪಡಿಯನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.