ಹೈದರಾಬಾದ್: ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರ ಅಣ್ವಸ್ತ್ರ ಬೆದರಿಕೆಯನ್ನು ಖಂಡಿಸಿರುವ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ಧೀನ್ ಓವೈಸಿ, ಈ ಬಗ್ಗೆ ಮೋದಿ ಸರ್ಕಾರವು ತೀಕ್ಷ್ಣ ರಾಜಕೀಯ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
‘ಮುನೀರ್ ಅವರು ಅಮೆರಿಕದ ನೆಲದಲ್ಲಿ ನಿಂತು ಭಾರತ ಮತ್ತು ಭಾರತೀಯರ ವಿರುದ್ಧ ಮಾತನಾಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಇದನ್ನು ಖಂಡಿಸಲು ಕೇವಲ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ಮಾತ್ರ ಸಾಕಾಗುವುದಿಲ್ಲ. ಭಾರತವು ಮುನೀರ್ ಹೇಳಿಕೆ ವಿರುದ್ಧ ಶಕ್ತವಾದ ಪ್ರತಿಭಟನೆಯನ್ನು ದಾಖಲಿಸಬೇಕು ಮತ್ತು ಈ ಬಗ್ಗೆ ಅಮೆರಿಕದೊಂದಿಗೆ ಮಾತುಕತೆ ನಡೆಸಬೇಕು’ ಎಂದು ಓವೈಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಪಾಕಿಸ್ತಾನದ ಮಿಲಿಟರಿ ವಿನ್ಯಾಸ ಏನೆಂದು ತಿಳಿದುಕೊಂಡು ಭಾರತವು ತನ್ನ ಶಸಸ್ತ್ರ ಪಡೆಯನ್ನು ಆಧುನೀಕರಣಗೊಳಿಸುವ ಅಗತ್ಯವಿದೆ. ಮೋದಿ ಸರ್ಕಾರವು ರಕ್ಷಣಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಕಡಿಮೆ ಅನುದಾನ ಮೀಸಲಿಡುವುದನ್ನು ಮುಂದುವರಿಸಬಾರದು. ನಾವು ಇನ್ನಷ್ಟು ಸನ್ನದ್ಧ ಸ್ಥಿತಿಯಲ್ಲಿರಬೇಕು’ ಎಂದು ಓವೈಸಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.