ಹೈದರಾಬಾದ್: ಪ್ರತಿ ಕುಟುಂಬವು ಮೂರು ಮಕ್ಕಳನ್ನು ಹೊಂದುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಶುಕ್ರವಾರ ವಾಗ್ದಾಳಿ ನಡೆಸಿದರು.
‘ಪಿಟಿಐ’ ಸುದ್ದಿಸಂಸ್ಥೆಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಜನರ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಅವರು (ಭಾಗವತ್) ಯಾರು? ಭಾರತೀಯ ಮಹಿಳೆಯರಿಗೆ ಅವರದ್ದೇ ಆದ ಆದ್ಯತೆಗಳಿವೆ, ಅವರ ಮೇಲೆ ಹೊರೆ ಹೇರಲು ಯತ್ನಿಸುತ್ತಿರುವುದು ಏಕೆ’ ಎಂದು ಹರಿಹಾಯ್ದರು.
ಭಾಗವತ್ ಅವರು ಗುರುವಾರ, ‘ಜನಸಂಖ್ಯಾ ಕುಸಿತ ತಡೆಯಲು ಹಾಗೂ ಸ್ಥಿರತೆ ತರಲು ಪ್ರತಿ ಕುಟುಂಬವು ಮೂರು ಮಕ್ಕಳನ್ನು ಹೊಂದುವ ಅಗತ್ಯವಿದೆ’ ಎಂದು ಹೇಳಿದ್ದರು.
ಧಾರ್ಮಿಕತೆ ಸೇರಿದಂತೆ ಯಾವುದೇ ಮಾದರಿಯ ದಾಳಿ ಬಗ್ಗೆ ಆರ್‌ಎಸ್‌ಎಸ್ ನಂಬಿಕೆ ಹೊಂದಿಲ್ಲ ಎಂಬ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಓವೈಸಿ, ‘ಭಾಗವತ್ ಅವರು ಅನೇಕ ಬಾರಿ ಮುಸ್ಲಿಮರನ್ನು ‘ಕದ್ದ ಮಾಲು’ ಮತ್ತು ‘ಮೊಘಲರ ವಂಶಸ್ಥರು’ ಎಂದು ಕರೆದಿದ್ದಾರೆ’ ಎಂದು ಹೇಳಿದರು.
ಧರ್ಮ ಸಂಸದ್‌ಗಳನ್ನು ಆಯೋಜಿಸಿದವರು, ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದವರು ಮತ್ತು ಮಹಿಳೆಯರ ಬಹಿರಂಗ ಅತ್ಯಾಚಾರಕ್ಕೆ ಕರೆ ನೀಡಿದವರು ಯಾರು ಎಂದು ಪ್ರಶ್ನಿಸಿದರು.
ಮುಸ್ಲಿಂ ವಿರೋಧಿ ದ್ವೇಷ ಭಾವನೆ ಹರಡಲು ಆರ್‌ಎಸ್‌ಎಸ್ ಮತ್ತು ಬೆಂಬಲಿತ ಸಂಸ್ಥೆಗಳೇ ಕಾರಣ ಎಂದು ಅವರು ದೂರಿದರು.
ಇದೇ ಸಂದರ್ಭದಲ್ಲಿ, ‘ಮಿಸ್ಟರ್ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಮುಸ್ಲಿಂ ದ್ವೇಷವು ಸಾಂಸ್ಥಿಕ ರೂಪ ಪಡೆದಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.