
ಪುಣೆ: ‘ದಿ ಹಿಂದೂ ಕಿಂಗ್ ಇನ್ ಇಸ್ಲಾಮಿಕ್ ಇಂಡಿಯಾ’ ಪುಸ್ತಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಪ್ರಕಟಿಸಿದ್ದ ಕೆಲವು ಪರಿಶೀಲನೆಯಾಗದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಭಾರತದ ಪ್ರಕಟಣಾ ವಿಭಾಗವು (ಒಯುಪಿ) ಶಿವಾಜಿಯ 13ನೇ ವಂಶಸ್ಥರಾದ ಉದಯನ್‌ರಾಜೆ ಭೋಸಲೆ ಅವರ ಬಳಿ ಕ್ಷಮೆಯಾಚಿಸಿದೆ.
2003ರಲ್ಲಿ ಪ್ರಕಟವಾಗಿದ್ದ ಈ ಪುಸ್ತಕದ ಪುಟ 31, 33, 34 ಹಾಗೂ 93ರಲ್ಲಿ ಇರುವ ಕೆಲವು ಹೇಳಿಕೆಗಳನ್ನು ಪರಿಶೀಲಿಸಲಾಗಿಲ್ಲ ಎಂದು ಪತ್ರಿಕೆಯೊಂದರಲ್ಲಿ ನೀಡಿರುವ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ.
ಹೇಳಿಕೆಗಳ ಕುರಿತು ವಿಷಾದ ವ್ಯಕ್ತಪಡಿಸಿರುವ ಒಯುಪಿ, ಉದಯನ್‌ರಾಜೆ ಭೋಸಲೆ ಮತ್ತು ಸಾರ್ವಜನಿಕರಿಗೆ ಉಂಟಾದ ತೊಂದರೆ ಹಾಗೂ ನೋವಿಗೆ ಕ್ಷಮೆಯಾಚಿಸಿದೆ.
ಅಮೆರಿಕದ ಲೇಖಕ ಜೇಮ್ಸ್ ಲೈನ್, ‘ದಿ ಹಿಂದೂ ಕಿಂಗ್ ಇನ್ ಇಸ್ಲಾಮಿಕ್ ಇಂಡಿಯಾ’ ಪುಸ್ತಕವನ್ನು ಬರೆದವರು. ‘ಪುಸ್ತಕದಲ್ಲಿ ಶಿವಾಜಿ ಮಹಾರಾಜರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾಗಿದೆ’ ಎಂದು ಆರೋಪಿಸಲಾಗಿತ್ತು. ಕೃತಿಯನ್ನು ವಿರೋಧಿಸಿ ಸಾಂಭಾಜಿ ಬ್ರಿಗೇಡ್ ಸಂಘಟನೆಯ 150ಕ್ಕೂ ಅಧಿಕ ಕಾರ್ಯಕರ್ತರು, ಪುಣೆಯ ಪ್ರಸಿದ್ಧ ಭಂಡಾರ್‌ಕರ್ ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮೇಲೆ ದಾಳಿ ನಡೆಸಿದ್ದರು.