ADVERTISEMENT

ದೇಶದ್ರೋಹ ಕಾನೂನು ರದ್ದುಪಡಿಸುವ ಪ್ರಸ್ತಾವವಿಲ್ಲ; ರಿಜಿಜು ವಿರುದ್ಧ ಚಿದಂಬರಂ ಕಿಡಿ

ಪಿಟಿಐ
Published 11 ಡಿಸೆಂಬರ್ 2021, 11:39 IST
Last Updated 11 ಡಿಸೆಂಬರ್ 2021, 11:39 IST
ಕಾಂಗ್ರೆಸ್ ನಾಯಕ ಪಿ.ಚಿದಂಬರಂ
ಕಾಂಗ್ರೆಸ್ ನಾಯಕ ಪಿ.ಚಿದಂಬರಂ    

ನವದೆಹಲಿ: ದೇಶದ್ರೋಹದ ಕಾನೂನನ್ನು ರದ್ದುಪಡಿಸುವ ಯಾವುದೇ ಪ್ರಸ್ತಾವನೆಯನ್ನು ಗೃಹ ಸಚಿವಾಲಯ ಹೊಂದಿಲ್ಲ ಎಂದು ಹೇಳಿಕೆ ನೀಡಿರುವ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಶನಿವಾರ ವಾಗ್ದಾಳಿ ನಡೆಸಿದರು. ಆದರೆ, 'ಅನೇಕ ಅಮಾಯಕರನ್ನು ಬಂಧಿಸುವ ಪ್ರಸ್ತಾಪವಿದೆ ಎಂಬುದನ್ನು ಸಚಿವರು ಹೇಳಿಲ್ಲ' ಎಂದು ವ್ಯಂಗ್ಯವಾಡಿದರು.

ಈ ಕುರಿತು ಚಿದಂಬರಂ ಅವರಿಗೆ ತಿರುಗೇಟು ನೀಡಿರುವ ರಿಜಿಜು, 'ಕಾಂಗ್ರೆಸ್ ಸರ್ಕಾರವಿದ್ದಾಗ ಎಷ್ಟು ಸಾವಿರ ಜನರ ಮೇಲಿನ ದೇಶದ್ರೋಹ ಪ್ರಕರಣಗಳನ್ನು ಹಿಂಪಡೆಯಲಾಗಿದೆ' ಎಂದು ಪ್ರಶ್ನಿಸಿದರು.

ದೇಶದ್ರೋಹಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124 ಎ ಅನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾವನೆಯು ಗೃಹ ಸಚಿವಾಲಯದ ಮುಂದಿಲ್ಲ ಎಂದು ಕಾನೂನು ಸಚಿವರು ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದ್ದರು.

ADVERTISEMENT

ಇತ್ತೀಚೆಗೆ ಸುಪ್ರೀಂ ಕೋರ್ಟ್ ದೇಶದ್ರೋಹ ಕಾನೂನನ್ನು ವಸಾಹತುಶಾಹಿ ಮತ್ತು ಅದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆಯೇ ಎಂದು ಕೇಳಿದ್ದ ಅಸ್ಸಾಂ ಸಂಸದ ಬದ್ರುದ್ದೀನ್ ಅಜ್ಮಲ್ ಅವರ ಪ್ರಶ್ನೆಗೆ ರಿಜಿಜು ಪ್ರತಿಕ್ರಿಯಿಸಿದ್ದಾರೆ. 'ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಯಾವುದೇ ತೀರ್ಪು ಅಥವಾ ಆದೇಶದಲ್ಲಿ ಅಂತಹ ಯಾವುದೇ ಅಭಿಪ್ರಾಯ ಕಂಡುಬಂದಿಲ್ಲ' ಎಂದಿದ್ದಾರೆ.

ಕಿರಣ್ ರಿಜಿಜು ಅವರ ಲಿಖಿತ ಉತ್ತರಕ್ಕೆ ಪ್ರತಿಕ್ರಿಯಿಸಿರುವ ಚಿದಂಬರಂ ಟ್ವೀಟ್ ಮಾಡಿ, ದೇಶದ್ರೋಹದ ಕಾನೂನನ್ನು (ಸೆಕ್ಷನ್ 124ಎ) ರದ್ದುಪಡಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಗೃಹ ಸಚಿವಾಲಯವು ಮಾಹಿತಿ ನೀಡಿದೆ ಎಂದು ಕಾನೂನು ಸಚಿವರು ಹೇಳಿದ್ದಾರೆ. ಆದರೆ, ದೇಶದ್ರೋಹದ ಕಾನೂನಿನಡಿ ಅಮಾಯಕರ ವಿರುದ್ಧ ಪ್ರಕರಣ ದಾಖಲಿಸುವ ಪ್ರಸ್ತಾವನೆಯು ಗೃಹ ಸಚಿವಾಲಯದ ಮುಂದಿದೆ ಎಂಬುದನ್ನು ಅವರು ಹೇಳಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ.

ಅಲ್ಲದೆ, 'ದೇಶದ್ರೋಹದ ಕಾನೂನಿನ ಮೇಲೆ ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿರುವ ಯಾವುದೇ ದಾಖಲೆಗಳಿಲ್ಲ ಎಂದೂ ಅವರು ಹೇಳಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್‌ನ ಕಲಾಪವನ್ನು ವರದಿ ಮಾಡುವ ಪತ್ರಿಕೆಗಳನ್ನು ತಾನು ಓದುವುದಿಲ್ಲ ಎಂದು ಅವರು ಹೇಳಿಲ್ಲ' ಎಂದು ಚಿದಂಬರಂ ಲೇವಡಿ ಮಾಡಿದ್ದಾರೆ.

ಚಿದಂಬರಂ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ರಿಜಿಜು, 'ಕಾನೂನು ಸಚಿವರು ಪತ್ರಿಕೆಗಳನ್ನು ಓದದಿರಬಹುದು ಆದರೆ ಮಾಧ್ಯಮಗಳ ವರದಿಗಳು ಅಧಿಕೃತ ದಾಖಲೆಗಳಾಗುವುದಿಲ್ಲ ಎಂಬುದನ್ನು ತಿಳಿದುಕೊಂಡಿದ್ದಾರೆ. ಹೇಗೆ ಅಭಿಪ್ರಾಯ ವ್ಯಕ್ತಪಡಿಸಬೇಕು ಮತ್ತು ಔಪಚಾರಿಕವಾಗಿ ಆದೇಶಗಳನ್ನು ಹೆೇಗೆ ನೀಡಬೇಕು ಎನ್ನುವ ಕುರಿತು ಗೌರವಾನ್ವಿತ ಸುಪ್ರೀಂ ಕೋರ್ಟ್‌ಗೆ ತಿಳಿದಿದೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.