ನವದೆಹಲಿ: ಪಾಕಿಸ್ತಾನದ ಬಹಾವಲ್ಪುರದಲ್ಲಿ ಭಾರತೀಯ ಪಡೆಗಳು ನಡೆಸಿದ ವಾಯುದಾಳಿಯಲ್ಲಿ ಭಯೋತ್ಪಾದಕ ಸಂಘಟನೆ ಜೈಶ್ ಎ ಮೊಹಮ್ಮದ್ (ಜೆಇಎಂ) ಉನ್ನತ ಕಮಾಂಡರ್ ಮಸೂದ್ ಅಜರ್ ಅವರ ಕುಟುಂಬವು ಛಿದ್ರವಾಗಿದೆ ಎಂದು ಉಗ್ರ ಸಂಘಟನೆಯ ಮತ್ತೊಬ್ಬ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ ಬಹಿರಂಗಪಡಿಸಿದ್ದಾನೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಬಂದೂಕುಧಾರಿ ಸಿಬ್ಬಂದಿಯೊಂದಿಗೆ ಕಾಣಿಸಿಕೊಂಡಿರುವ ಕಾಶ್ಮೀರಿ, ಮಸೂದ್ ಅಜರ್ ಅವರ ಅಡಗುದಾಣವನ್ನು ಗುರುತಿಸಿದ ನಂತರ ಭಾರತೀಯ ಪಡೆಗಳು ಅವರ ಮೇಲೆ ಹೇಗೆ ದಾಳಿ ಮಾಡಿದವು ಎಂಬುದನ್ನು ವಿವರಿಸಿದ್ದಾರೆ.
ಭಯೋತ್ಪಾದನೆಯನ್ನು ಸ್ವೀಕರಿಸಿ, ಈ ದೇಶದ ಗಡಿಗಳನ್ನು ರಕ್ಷಿಸುವುದಕ್ಕಾಗಿ ನಾವು ದೆಹಲಿ, ಕಾಬೂಲ್ ಮತ್ತು ಕಂದಹಾರ್ ವಿರುದ್ಧ ಹೋರಾಡಿದ್ದೇವೆ ಎಂದು ಅವನು ಹೇಳುವುದನ್ನು ವಿಡಿಯೊದಲ್ಲಿ ಕೇಳಬಹುದು.
ಇಷ್ಟೆಲ್ಲ ತ್ಯಾಗ ಮಾಡಿದ ನಂತರ, ಮೇ 7ರಂದು, ಬಹಾವಲ್ಪುರದಲ್ಲಿ ಭಾರತೀಯ ಪಡೆಗಳು ದಾಳಿ ನಡೆಸಿ ಮೌಲಾನಾ ಮಸೂದ್ ಅಜರ್ ಅವರ ಕುಟುಂಬವನ್ನು ತುಂಡು ತುಂಡು ಮಾಡಿವೆ ಎಂದು ಹೇಳಿದ್ದಾನೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಉಗ್ರ ಮಸೂದ್ ಅಜರ್ ಕುಟುಂಬವನ್ನು ಕೊಂದಿರುವುದಾಗಿ ಭಾರತ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.