ಮುಂಬೈ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಿಂದ ದೇಶದ ಆರ್ಥಿಕತೆಗೆ ಯಾವುದೇ ಪೆಟ್ಟುಬಿದ್ದಿಲ್ಲ ಎಂದು ಶುಕ್ರವಾರ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
ಈ ಸಂಘರ್ಷವು ಆರ್ಥಿಕತೆಯ ಮೇಲೆ ಅತಿ ಕಡಿಮೆ ಪ್ರಮಾಣದ ಪರಿಣಾಮವನ್ನಷ್ಟೇ ಉಂಟುಮಾಡಿದೆ. ಉತ್ತರ ಭಾರತದ ಹಲವೆಡೆ ವಿಮಾನಯಾನ ಕುಂಟಿತಗೊಂಡಿದ್ದರಿಂದ ಕೆಲವು ದಿನಗಳ ಕಾಲ ಆರ್ಥಿಕತೆಯ ಮೇಲೆ ಅದರ ಹೊಡೆತ ಬಿದ್ದಿತ್ತು, ಆದರೆ ಅದರಿಂದ ಯಾವುದೇ ದೊಡ್ಡ ಪ್ರಮಾಣದ ನಷ್ಟವಾಗಿಲ್ಲ ಎಂದರು.
ಸಂಘರ್ಷದ ತೀವ್ರತೆಯಿದ್ದ ಕೆಲವು ದಿನಗಳ ಕಾಲ ಆ ಪ್ರದೇಶಗಳಲ್ಲಿ ಬೆಲೆ ಏರಿಕೆಯಾಗಿತ್ತಾದರೂ, ಇದೀಗ ಪರಿಸ್ಥಿತಿ ಮತ್ತೆ ಮೊದಲಿನಂತಾಗಿದೆ. ಇದು ದೇಶದ ಆರ್ಥಿಕತೆಯ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಕೋವಿಡ್ –19 ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಆರ್‌ಬಿಐ ಗವರ್ನರ್, ‘ಕೋವಿಡ್ ಇದೀಗ ಕೇವಲ ಒಂದು ವೈರಾಣುವಷ್ಟೇ. ಅದು ಹಾಗೆ ಇರುತ್ತದೆ ಎಂದು ಆಶಿಸುತ್ತೇನೆ’ ಎಂದರು.
ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ‘ಅಪರೇಷನ್ ಸಿಂಧೂರ’ಮೂಲಕ ಪಾಕಿಸ್ತಾನದಲ್ಲಿದ್ದ ಉಗ್ರನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.