ಭದ್ರತಾ ಪಡೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆಯು ಮತ್ತೆ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಮತ್ತೊಮ್ಮೆ ಕದನ ವಿರಾಮವನ್ನು ಉಲ್ಲಂಘಿಸಿದೆ.
ಗುಂಡಿನ ದಾಳಿಗೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾಗಿರುವ ಉದ್ವಿಗ್ನತೆ ಸತತ 12ನೇ ದಿನವೂ ಮುಂದುವರಿದಿದ್ದು, ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ.
ಮೇ 4ರ ತಡರಾತ್ರಿ, ಪಾಕಿಸ್ತಾನಿ ಸೇನೆಯು ಎಲ್‌ಒಸಿಯಾದ್ಯಂತ (ಗಡಿ ನಿಯಂತ್ರಣ ರೇಖೆ) ಕುಪ್ವಾರ, ಮೆಂಧರ್, ನೌಶೇರಾ, ಬಾರಾಮುಲ್ಲಾ, ಪೂಂಚ್, ರಾಜೌರಿ, ಸುಂದರ್‌ಬನಿ ಮತ್ತು ಜಮ್ಮು-ಕಾಶ್ಮೀರದ ಅಖ್ನೂರ್ ಬಳಿಯ ಪ್ರದೇಶಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ. ಭಾರತೀಯ ಸೇನೆಯು ತ್ವರಿತವಾಗಿ ಪ್ರತ್ಯುತ್ತರ ನೀಡಿದೆ ಎಂದು ಜಮ್ಮುವಿನ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಏಳು ಗಡಿ ಜಿಲ್ಲೆಗಳ ಪೈಕಿ ಐದು ಜಿಲ್ಲೆಗಳಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಸಾಂಬಾ ಮತ್ತು ಕಥುವಾ ಜಿಲ್ಲೆಗಳ ಅಂತರರಾಷ್ಟ್ರೀಯ ಗಡಿಯಲ್ಲಿ ಯಾವುದೇ ಗುಂಡಿನ ಚಕಮಕಿ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ ಕೆಲವು ಗಂಟೆಗಳೇ ಏಪ್ರಿಲ್ 24ರ ತಡರಾತ್ರಿಯಿಂದ ಪಾಕಿಸ್ತಾನಿ ಸೇನೆಯು ಕಾಶ್ಮೀರ ಕಣಿವೆ ಸೇರಿದಂತೆ ಎಲ್‌ಒಸಿ ಉದ್ದಕ್ಕೂ ಅಪ್ರಚೋದಿತ ದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.