ADVERTISEMENT

Operation Sindoor| ರಜೆಯಲ್ಲಿರುವ ಸಿಬ್ಬಂದಿಯನ್ನು ವಾಪಸ್‌ ಕರೆಸಿ; ಅಮಿತ್‌ ಶಾ

​ಪ್ರಜಾವಾಣಿ ವಾರ್ತೆ
Published 7 ಮೇ 2025, 8:01 IST
Last Updated 7 ಮೇ 2025, 8:01 IST
ಅಮಿತ್‌ ಶಾ 
ಅಮಿತ್‌ ಶಾ    

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಇಂದು (ಬುಧವಾರ) ಮುಂಜಾನೆ ಕ್ಷಿಪಣಿ ದಾಳಿ ನಡೆಸಿದೆ.

ಈ ನಡುವೆ ಗೃಹ ಸಚಿವ ಅಮಿತ್‌ ಶಾ ಅವರು ಅರೆಸೈನಿಕ ಪಡೆಗಳ ಮುಖ್ಯಸ್ಥರಿಗೆ ರಜೆಯಲ್ಲಿರುವ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವಂತೆ ಸೂಚನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಅಮಿತ್ ಶಾ ಅವರು, ಗಡಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.

ADVERTISEMENT

ತುರ್ತು ಸಂದರ್ಭಗಳಲ್ಲಿ ನಾಗರಿಕರ ಆಶ್ರಯಕ್ಕಾಗಿ ಬಂಕರ್‌ಗಳನ್ನು ಸಿದ್ಧವಾಗಿಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶಾ ಅವರು ಸೂಚಿಸಿರುವುದಾಗಿ ಮೂಲಗಳು ಹೇಳಿವೆ.

ರಜೆಯಲ್ಲಿರುವ ಎಲ್ಲಾ ಸಿಬ್ಬಂದಿಯನ್ನು ವಾಪಸ್‌ ಕರೆಸಿಕೊಳ್ಳುವಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಮುಖ್ಯಸ್ಥರಿಗೆ ಶಾ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ, ದೇಶದ ಆಂತರಿಕ ಭದ್ರತಾ ಪರಿಸ್ಥಿತಿಯನ್ನು ಶಾ ಅವರು ಪರಿಶೀಲಿಸಿದ್ದಾರೆ. ಉನ್ನತ ಮಟ್ಟದ ಭದ್ರತಾ ಅಧಿಕಾರಿಗಳು ಜಾಗರೂಕರಾಗಿಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಅವರು ಹೇಳಿದ್ದಾರೆ.

ಭಾರತ ಮತ್ತು ದೇಶದ ಜನರ ಮೇಲೆ ನಡೆಯುವ ಯಾವುದೇ ದಾಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ಮೋದಿ ಸರ್ಕಾರ ಬದ್ಧವಾಗಿದೆ. ಭಯೋತ್ಪಾದನೆಯನ್ನು ಬೇರು ಸಹಿತ ನಿರ್ಮೂಲನೆ ಮಾಡಲು ಭಾರತ ಧೃಡ ಸಂಕಲ್ಪ ಹೊಂದಿದೆ ಎಂದು ಶಾ ತಿಳಿಸಿದ್ದಾರೆ.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ‘ಆಪರೇಷನ್‌ ಸಿಂಧೂರ‘ ಕಾರ್ಯಾಚರಣೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.