ಭದ್ರತಾ ಪಡೆ
(ಪಿಟಿಐ ಚಿತ್ರ)
ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಇಡೀ ಜಗತ್ತಿಗೆ ಒಗ್ಗಟ್ಟಿನ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದು ನಿರ್ಣಯ ಅಂಗೀಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಇಂದು (ಶುಕ್ರವಾರ) ಒತ್ತಾಯಿಸಿದ್ದಾರೆ.
ಸರ್ಕಾರ ಹಾಗೂ ವಿಪಕ್ಷಗಳ ಸಂಸದರ ನಿಯೋಗಗಳನ್ನು ವಿವಿಧ ದೇಶಗಳಿಗೆ ರವಾನಿಸಿ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹೇರುವಂತೆಯೂ ಸಿಬಲ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅಮೆರಿಕ ನಿರ್ಬಂಧ ವಿಧಿಸುವಂತೆಯೇ ಪಾಕಿಸ್ತಾನದೊಂದಿಗೆ ವ್ಯಾಪಾರ ಹೊಂದಿರುವ ಎಲ್ಲ ಪ್ರಮುಖ ರಾಷ್ಟ್ರಗಳಿಗೂ ನಮ್ಮ ಮಾರುಕಟ್ಟೆಗೆ ಬರಲು ಸಾಧ್ಯವಿಲ್ಲ ಎಂಬ ಸಂದೇಶ ಸಾರಬೇಕು' ಎಂದು ಹೇಳಿದ್ದಾರೆ.
'ಭಾರತದ ಸಾರ್ವಭೌಮತ್ವದ ಮೇಲಿನ ದಾಳಿ ಆಗಿರುವುದರಿಂದ ಇಡೀ ದೇಶವು ನಿಮ್ಮೊಂದಿಗೆ ಇದೆ. ಈ ಕ್ಷಣದಲ್ಲಿ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಈ ಕುರಿತು ಚರ್ಚೆ ನಡೆಸುವಂತೆ ಪ್ರಧಾನಿ ಅವರಿಗೆ ಸೂಚಿಸಲು ಬಯಸುತ್ತೇನೆ. ಇಡೀ ದೇಶವೇ ಒಗ್ಗಟ್ಟಾಗಿದ್ದು, ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ದೇಶದ ಭಾವನೆಯನ್ನು ವಿಶ್ವದ ಮುಂದೆ ವ್ಯಕ್ತಪಡಿಸಲು ಸಂಸತ್ತಿನಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಬೇಕು' ಎಂದು ಸಲಹೆ ನೀಡಿದ್ದಾರೆ.
'ಭಯೋತ್ಪಾದಕನಿಗೆ ಯಾವುದೇ ಧರ್ಮ ಇರುವುದಿಲ್ಲ. ಪಾಕಿಸ್ತಾನವು ಭಯೋತ್ಪಾದನೆಯ ಮೂಲಕ ತನ್ನ ಸಮಸ್ಯೆಗಳನ್ನು ಜಗತ್ತಿನ ಮುಂದಿಡಲು ಬಯಸುತ್ತದೆ' ಎಂದು ಅವರು ಹೇಳಿದ್ದಾರೆ.
ಆಫ್ರಿಕಾ, ಅಮೆರಿಕ, ಯುರೋಪ್, ಚೀನಾ, ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ರಷ್ಯಾ, ದಕ್ಷಿಣ ಅಮೆರಿಕ ಸೇರಿದಂತೆ ಪ್ರಮುಖ ರಾಷ್ಟ್ರಗಳಿಗೆ ಸರ್ಕಾರ ಹಾಗೂ ವಿಪಕ್ಷಗಳ ಸಂಸದರ ನಿಯೋಗವನ್ನು ಕಳುಹಿಸಿ ರಾಜತಾಂತ್ರಿಕ ಒತ್ತಡ ಹೇರುವಂತೆಯೂ ಸಿಬಲ್ ಒತ್ತಾಯಿಸಿದ್ದಾರೆ.
ಗುರುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರಿಗೆ ಬಿಹಾರದಲ್ಲಿ ನಡೆದ ಸಭೆ ಮುಖ್ಯ ಎನಿಸಿತುಕಪಿಲ್ ಸಿಬಲ್ ರಾಜ್ಯಸಭಾ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.