ನವದೆಹಲಿ: ಪಾಕ್ ಉಗ್ರ ನೆಲೆಗಳ ಮೇಲೆ ನಡೆದ ‘ಆಪರೇಷನ್ ಸಿಂಧೂರ’ ದಾಳಿಯು, ಪಹಲ್ಗಾಮ್ ಉಗ್ರ ದಾಳಿಯ ವಿರುದ್ಧದ ಪ್ರತೀಕಾರದ ಆರಂಭವಷ್ಟೇ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಎಂದು ಹೇಳಿದೆ.
ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ, ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿಮಾಡಲಾಗಿತ್ತು. ಇದರಲ್ಲಿ ಕುಖ್ಯಾತ ಉಗ್ರ ಸಂಘಟನೆಗಳಾದ ಜೈಷ್–ಎ–ಮೊಹಮ್ಮದ್ ಹಾಗೂ ಲಷ್ಕರ್–ಎ–ತಯಾಬಾ ಉಗ್ರ ಸಂಘನೆಗಳ ನೆಲೆಯೂ ಸೇರಿತ್ತು.
‘ಆಪರೇಷನ್ ಸಿಂಧೂರ’ದಾಳಿಯು ಪಹಲ್ಗಾಮ್ ಉಗ್ರ ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯಕೊಡುವ ಪ್ರಯತ್ನದ ಮೊದಲ ಹೆಜ್ಜೆ ಇದಾಗಿದೆ. ಮೃತರಿಗೆ ನ್ಯಾಯ ಸಿಕ್ಕಿದೆ. ದೇಶವು ಇದನ್ನು ಬೆಂಬಲಿಸುತ್ತದೆ. ಜೈ ಹಿಂದ್, ಭಾರತ ಮಾತೆಗೆ ಜಯವಾಗಲಿ ಎಂದು ಆರ್‌ಎಸ್‌ಎಸ್ ರಾಷ್ಟ್ರೀಯ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಸುನೀಲ್ ಅಂಬೇಕರ್ ಅವರು ಸಾಮಜಿಕ ಮಾಧ್ಯಮ ಎಕ್ಸ್(ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಆಪರೇಷನ್ ಸಿಂಧೂರ’ ಮೂಲಕ ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ಇದಕ್ಕಾಗಿ ಭಾರತೀಯ ಸೇನೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಜಿಹಾದಿ ಪಾಕಿಸ್ತಾನಿಯರ ಮನೆಗೆ ನುಗ್ಗಿ, ಉಗ್ರ ನೆಲೆಗಳನ್ನು ನಾಶ ಮಾಡುವ ಮೂಲಕ ಭಾರತೀಯ ಸೇನೆ ಶೌರ್ಯ ಪ್ರದರ್ಶನ ಮಾಡಿದೆ. ಭಾರತದ ವಿರುದ್ಧ ಬಂದರೆ, ಅವರನ್ನು ನಾಶ ಮಾಡುವುದಾಗಿ ಭಾರತೀಯ ಸೇನೆ ಈ ಮೂಲಕ ಸ್ಪಷ್ಟಪಡಿಸಿದೆ ಎಂದು ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಎಕ್ಸ್(ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದೆ.
ಪಹಲ್ಗಾಮ್‌ನಲ್ಲಿ ಉಗ್ರರು 26 ಪ್ರವಾಸಿಗರನ್ನು ಹತ್ಯೆ ಮಾಡಿದ ಎರಡು ವಾರಗಳ ನಂತರ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಉಗ್ರರ ನೆಲೆಗಳನ್ನು ನಾಶ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.