ನರೇಂದ್ರ ಮೋದಿ
(ಪಿಟಿಐ ಚಿತ್ರ)
ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಗುರಿಯಾಗಿಸಿ ಸಶಸ್ತ್ರ ಪಡೆ ನಡೆಸಿರುವ ದಾಳಿಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ನೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದೆ.
ಭಾರತೀಯ ಸಶಸ್ತ್ರ ಪಡೆ ಉಗ್ರರ ವಿರುದ್ಧ ನಡೆಸಿರುವ ಯಶಸ್ವಿ ಕಾರ್ಯಾಚರಣೆಯು 'ನಮ್ಮೆಲ್ಲರ ಪಾಲಿಗೆ ಹೆಮ್ಮೆಯ ಕ್ಷಣ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
ದಾಳಿಕೋರರನ್ನು ಹಾಗೂ ಬೆಂಬಲಿಸಿದವರನ್ನು ಅವರ ಕಲ್ಪನೆಗೂ ಮೀರಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಪ್ರಧಾನಿ ಮೋದಿ ಶಪಥ ಮಾಡಿದ್ದರು. ಅಲ್ಲದೆ ಉಗ್ರರ ದಮನಕ್ಕೆ ದಾಳಿಯ ಮಾದರಿ, ಗುರಿ ಹಾಗೂ ಸಮಯ ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯವನ್ನು ನೀಡಿದ್ದರು.
ಇದೀಗ 14 ದಿನಗಳ ಬಳಿಕ ಲಷ್ಕರ್-ಎ-ತಯಬಾ, ಜೈಶ್-ಎ-ಮೊಹಮ್ಮದ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಸಶಸ್ತ್ರ ಪಡೆಗಳು ಕ್ಷಿಪಣಿ ದಾಳಿ ನಡೆಸಿದ್ದು, ಉಗ್ರರ ಒಂಬತ್ತು ನೆಲೆಗಳನ್ನು ಧ್ವಂಸಗೊಳಿಸಿದೆ.
ಸಂಪುಟ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, 'ಆಪರೇಷನ್ ಸಿಂಧೂರ' ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಎಲ್ಲ ಸಚಿವರೂ ಮೇಜನ್ನು ತಟ್ಟಿ ಸ್ವಾಗತಿಸಿದ್ದಾರೆ.
ಭಯೋತ್ಪಾದನೆ ವಿರುದ್ಧ 'ಶೂನ್ಯ ಸಹಿಷ್ಣುತೆ ನೀತಿ' ಅನುಸರಿಸಲಾಗುವುದು ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ.
ಬಳಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರನ್ನು ಭೇಟಿಯಾಗಿರುವ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.