ಚಂಡೀಗಢ: ಸಾರ್ಕ್ ವೀಸಾ ಯೋಜನೆ (SVES) ಅಡಿಯಲ್ಲಿ ಭಾರತಕ್ಕೆ ಬಂದಿದ್ದ ಹಲವು ಪಾಕಿಸ್ತಾನ ಪ್ರಜೆಗಳು ಅಮೃತಸರದಲ್ಲಿರುವ ಅಟ್ಟಾರಿ–ವಾಘಾ ಭೂಗಡಿ ಮೂಲಕ ಗುರುವಾರ ಹಿಂತಿರುಗುತ್ತಿದ್ದಾರೆ.
ಬೆಳಿಗ್ಗೆಯಿಂದಲೆ ಹಲವು ಕುಟುಂಬಗಳು ಅಟ್ಟಾರಿ-ವಾಘಾ ಭೂ ಮಾರ್ಗದ ಮೂಲಕ ತಮ್ಮ ದೇಶಕ್ಕೆ ಮರಳಲು ಅಮೃತಸರದ ಅಟ್ಟಾರಿ ಗಡಿಯಲ್ಲಿ ಇರುವ ಚೆಕ್‌ಪೋಸ್ಟ್ ತಲುಪಿವೆ. ಪಾಕಿಸ್ತಾನಕ್ಕೆ ಪ್ರಯಾಣಿಸಲು ವೀಸಾ ಹೊಂದಿರುವ ಕೆಲವು ಭಾರತೀಯ ಪ್ರಜೆಗಳು ಇಲ್ಲಿಗೆ ತಲುಪಿದ್ದಾರೆ.
ಪಾಕಿಸ್ತಾನದ ಪ್ರಜೆಗಳಿಗೆ ಸಾರ್ಕ್ ವೀಸಾ ವಿನಾಯಿತಿ ಯೋಜನೆಯ ಅಡಿಯಲ್ಲಿ ಭಾರತ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಈಗಾಗಲೇ ಇಂತಹ ವೀಸಾ ಪಡೆದಿದ್ದರೆ, ಅದು ರದ್ದಾಗಿದೆ ಎಂದು ಭಾವಿಸಬೇಕು. ಈ ವೀಸಾ ಯೋಜನೆ ಅಡಿಯಲ್ಲಿ ಭಾರತಕ್ಕೆ ಬಂದವರು ಮುಂದಿನ 48 ಗಂಟೆಯಲ್ಲಿ ಭಾರತ ತೊರೆಯಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಟ್ಟಾರಿ ಗಡಿಯಲ್ಲಿ ಇರುವ ಚೆಕ್‌ಪೋಸ್ಟ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲಾಗುತ್ತದೆ. ಈ ಮಾರ್ಗದ ಮೂಲಕ ಗಡಿ ದಾಟಿದವರು ಮೇ 1ಕ್ಕೆ ಮೊದಲು ವಾಪಸ್ಸಾಗಬೇಕು ಎಂದೂ ಸೂಚಿಸಲಾಗಿದೆ.
ನಮ್ಮ ಸಂಬಂಧಿಕರೊಬ್ಬರನ್ನು ನೋಡಲು ನಾವು ಏಪ್ರಿಲ್ 15ರಂದು ದೆಹಲಿಗೆ ಬಂದಿದ್ದೆವು. ನಮಗೆ 45 ದಿನಗಳ ವೀಸಾ ಇತ್ತು. ಆದರೂ ಇಂದು ಕರಾಚಿಗೆ ವಾಪಸ್ ಆಗುತ್ತಿದ್ದೇವೆ. ಎರಡು ದೇಶಗಳು ಸ್ನೇಹಪೂರ್ವಕವಾಗಿ ಇರಬೇಕು. ದ್ವೇಷಕ್ಕೆ ಯಾವುದೇ ಸ್ಥಾನವಿರಬಾರದು. ಯಾರೇ ದಾಳಿ ಮಾಡಿದ್ದರೂ ಅದು ತಪ್ಪು ಎಂದು ಪಾಕಿಸ್ತಾನದ ಶೇಖ್ ಫಜಲ್ ಅಹಮ್ಮದ್ ಹೇಳಿದ್ದಾರೆ.
90 ದಿನಗಳ ವೀಸಾ ಇತ್ತು. ಆದರೂ ಇಂದು ವಾಪಸ್ ಹೊರಡುತ್ತಿದ್ದೇವೆ. ಪಹಲ್ಗಾಮ್ ದಾಳಿ ನಡೆಯಬಾರದಿತ್ತು. ನಾನು ಅದನ್ನು ಖಂಡಿಸುತ್ತೇನೆ ಎಂದು ಪಾಕಿಸ್ತಾನದ ಮನ್ಸೂರ್ ಹೇಳಿದ್ದಾರೆ.
ಪಹಲ್ಗಾಮ್ ದಾಳಿ ನಡೆಯಬಾರದಿತ್ತು. ಆದರೆ ಎಲ್ಲಾ ಪಾಕ್ ಪ್ರಜೆಗಳು ಭಾರತವನ್ನು ತೊರೆಯುವಂತೆ ಹೇಳುವುದು ಸರಿಯಲ್ಲ ಎಂದು ಪಾಕಿಸ್ತಾನದ ಮತ್ತೊಬ್ಬ ಪ್ರಜೆ ಮುಸ್ತಫಾ ಹೇಳಿದ್ದಾರೆ.
ಭಾರತಕ್ಕೆ ಬಂದಿದ್ದ ಪಾಕಿಸ್ತಾನ ದಂಪತಿ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ವಾಪಸಾದರು –ಪಿಟಿಐ ಚಿತ್ರ
‘ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಕೈಗೊಂಡ ಕ್ರಮಗಳಿಗೆ ಅನುಸಾರವಾಗಿ ಭಾರತ–ಪಾಕ್ ಗಡಿಯಲ್ಲಿ ಎರಡು ದೇಶಗಳ ಸೈನಿಕರು ದಿನದ ಅಂತ್ಯದಲ್ಲಿ ನಡೆಸುತ್ತಿದ್ದ ಕವಾಯತು ಕಾರ್ಯಕ್ರಮವನ್ನು ನಿಲ್ಲಿಸಲಾಗುತ್ತಿದೆ’ ಎಂದು ಬಿಎಸ್‌ಎಫ್ ಗುರುವಾರ ಹೇಳಿದೆ. ಪಂಜಾಬ್‌ನ ಭಾರತ–ಪಾಕ್‌ನ ಅಟ್ಟಾರಿ ಹುಸೈನಿವಾಲಾ ಹಾಗೂ ಸದಗಿ ಗಡಿ ಪ್ರದೇಶದಲ್ಲಿ ಪ್ರತಿದಿನವೂ ಭಾರತದ ಬಿಎಸ್‌ಎಫ್ ಹಾಗೂ ಪಾಕಿಸ್ತಾನದ ರೇಂಜರ್ಸ್‌ನವರು ಕವಾಯತು ನಡೆಸುತ್ತಿದ್ದರು. ಧ್ವಜ ಇಳಿಸುವ ಕಾರ್ಯಕ್ರಮವೂ ಪ್ರತಿನಿತ್ಯ ನಡೆಯುತ್ತಿತ್ತು. ಈ ಕಾರ್ಯಕ್ರಮವನ್ನು ನೋಡಲು ದೇಶ ವಿದೇಶಗಳ ನೂರಾರು ಪ್ರವಾಸಿಗರು ಸೇರುತ್ತಿದ್ದರು. ‘ಬಹಳ ಯೋಚಿಸಿ ತೆಗೆದುಕೊಂಡ ನಿರ್ಧಾರ ಇದಾಗಿದೆ. ಭಾರತ–ಪಾಕಿಸ್ತಾನದ ಗಾರ್ಡ್ ಕಮಾಂಡರ್‌ಗಳ ಮಾಡುತ್ತಿದ್ದ ಹಸ್ತಲಾಘವ ಸಂಪ್ರದಾಯವನ್ನೂ ನಿಲ್ಲಿಸಲಾಗುತ್ತಿದೆ. ಈ ಗಡಿಗಳಲ್ಲಿ ಭಾರತದ ಸೈನಿಕರು ನಡೆಯುತ್ತಿರುವ ಇತರೆ ಕಾರ್ಯಕ್ರಮಗಳು ಮುಂದುವರಿಯಲಿವೆ’ ಎಂದು ಬಿಎಸ್‌ಎಫ್ ಹೇಳಿದೆ. ‘ಧ್ವಜ ಇಳಿಸುವ ಕಾರ್ಯಕ್ರಮ ಮುಂದುವರಿಯಲಿದೆ. ಇದಕ್ಕೆ ಸಾರ್ವಜನಿಕರು ಸಾಕ್ಷಿಯಾಗಬಹುದು. ಶಾಂತಿ ಮತ್ತು ಪ್ರಚೋದನೆಗಳು ಒಟ್ಟಿಗೆ ಇರಲು ಸಾಧ್ಯವಿಲ್ಲ. ನಮ್ಮ ಈ ನಿರ್ಧಾರವು ನಮ್ಮ ಕಳವಳವನ್ನು ಪ್ರತಿಫಲಿಸುತ್ತದೆ’ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.