ಕುಲ್ಗಾಮ್ ಜಿಲ್ಲೆ ಮತಲ್ಹಾಮಾದಲ್ಲಿರುವ ಶಂಕಿತ ಉಗ್ರ ಝಾಕೀರ್ ಅಹ್ಮದ್ ಗಾನಿ ಮನೆಯನ್ನು ಶನಿವಾರ ನೆಲಸಮಗೊಳಿಸಲಾಗಿದೆ
–ಪಿಟಿಐ ಚಿತ್ರ
ಶ್ರೀನಗರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಜನರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಭಯೋತ್ಪಾದಕರು ಹಾಗೂ ಅವರಿಗೆ ಬೆಂಬಲ ನೀಡುವವರ ನಿಗ್ರಹ ಕಾರ್ಯಾಚರಣೆಯನ್ನು ಚುರುಕುಗೊಳಿಸಿ ರುವ ಭದ್ರತಾ ಪಡೆಗಳು, ಲಷ್ಕರ್–ಎ–ತಯಬಾದ (ಎಲ್‌ಇಟಿ) ಐವರು ಸಕ್ರಿಯ ಉಗ್ರರ ಮನೆಗಳನ್ನು ಧ್ವಂಸಗೊಳಿಸಿದ್ದು, ನೂರಾರು ಶಂಕಿತರನ್ನು ಶನಿವಾರ ವಶಕ್ಕೆ ಪಡೆದಿವೆ.
‘ನಮ್ಮ ಸಂಬಂಧಿಗಳು ಮಾಡಿದ ಕೃತ್ಯಕ್ಕಾಗಿ ಅಧಿಕಾರಿಗಳು ನಮಗೆ ಶಿಕ್ಷೆ ವಿಧಿಸುತ್ತಿದ್ದಾರೆ’ ಎಂದು ಉಗ್ರರ ಕುಟುಂಬಗಳ ಸದಸ್ಯರು ಆರೋಪಿಸಿದ್ದಾರೆ.
ಜಮ್ಮು–ಕಾಶ್ಮೀರ ಪೊಲೀಸರ ತಂಡ ಹಾಗೂ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿವೆ.
ಪುಲ್ವಾಮಾ ಜಿಲ್ಲೆಯ ಮುರ‍್ರಾನ್ ಗ್ರಾಮದಲ್ಲಿ ಅಹ್ಸಾನ್ ಉಲ್ ಹಕ್ ಶೇಖ್‌ಗೆ ಸೇರಿದ ಎರಡು ಅಂತಸ್ತಿನ ಮನೆಯನ್ನು ಸ್ಫೋಟಕಗಳನ್ನು ಬಳಸಿ ನೆಲಸಮಗೊಳಿಸಲಾಗಿದೆ. 2023ರಲ್ಲಿ ಈತ ಎಲ್‌ಇಟಿ ಸೇರಿದ್ದ ಎನ್ನಲಾಗಿದೆ.
ಉಗ್ರರು ಹಾಗೂ ಅವರಿಗೆ ನೆರವು ನೀಡಿದ ಆರೋಪ ಎದುರಿಸುತ್ರಿರುವವ ಮನೆಗಳನ್ನು ಧ್ವಂಸ ಮಾಡಿರುವರ ಭದ್ರತಾ ಪಡೆಗಳ ಕ್ರಮಕ್ಕೆ ಅವರ ಕುಟುಂಬಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಜಮ್ಮು–ಕಾಶ್ಮೀರದಲ್ಲಿ ಸಕ್ರಿಯವಾಗಿರುವ 14 ಜನ ಸ್ಥಳೀಯ ಉಗ್ರರ ಪಟ್ಟಿಯನ್ನು ಭದ್ರತಾ ಪಡೆಗಳು ಸಿದ್ಧಪಡಿಸಿವೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಆದಿಲ್ ರೆಹಮಾನ್ ಡೆಂಟೂ(21), ಆಸಿಫ್ ಅಹ್ಮದ್ ಶೇಖ್(28),
ಅಹ್ಸಾನ್ ಅಹ್ಮದ್ ಶೇಖ್(23), ಹ್ಯಾರಿಸ್ ನಜೀರ್ (20), ಆಮೀರ್ ನಜೀರ್ ವಾನಿ (20), ಯಾವರ್ ಅಹ್ಮದ್ ಭಟ್(24), ಆಸಿಫ್ ಅಹ್ಮದ್ ಖಂಡೆ(24), ನಾಸೀರ್ ಅಹ್ಮದ್ ವಾನಿ (21), ಶಹೀದ್ ಅಹ್ಮದ್ ಕುಟೆ(27), ಆಮೀರ್ ಅಹ್ಮದ್ ದರ್, ಜುಬೇರ್ ಅಹ್ಮದ್ ವಾನಿ(39), ಹರೂನ್ ರಶೀದ್ ಗಾನಿ(32) ಹಾಗೂ ಝಾಕೀರ್ ಅಹ್ಮದ್ ಗಾನಿ(29) ಹೆಸರು ಪಟ್ಟಿಯಲ್ಲಿವೆ.
ಕಾಶ್ಮೀರದ ಪುಲ್ವಾಮಾ ಜಿಲ್ಲೆ ಮುರ‍್ರಾನ್‌ನಲ್ಲಿನ ಶಂಕಿತ ಭಯೋತ್ಪಾದಕ ಅಹ್ಸಾನ್ ಉಲ್ ಹಕ್ ಶೇಖ್ ಮನೆಯನ್ನು ಧ್ವಂಸಗೊಳಿಸಲಾಗಿದೆ
ಇಸ್ಲಾಮಾಬಾದ್ (ಪಿಟಿಐ/ಎಎಫ್‌ಪಿ): ‘ಪಾಕಿಸ್ತಾನಕ್ಕೆ ಹರಿಯುವ ನೀರನ್ನು ನಿಲ್ಲಿಸಲು ಭಾರತವು ಮುಂದಾದರೆ ರಕ್ತಪಾತ ಆಗಲಿದೆ’ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೊ ಜರ್ದಾರಿ ಬೆದರಿಕೆ ಹಾಕಿದ್ದಾರೆ.
ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ನಡೆಸುವ ‘ತಟಸ್ಥ, ಪಾರದರ್ಶಕ ಮತ್ತು ವಿಶ್ವಾಸಾರ್ಹ’ ತನಿಖೆಗೆ ಸಹಕರಿಸಲು ತಮ್ಮ ದೇಶ ಸಿದ್ಧ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಶನಿವಾರ ಹೇಳಿದ್ದಾರೆ.
ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತ ಮಾಡಿರುವ ಆರೋಪವನ್ನು ಅವರು ಅಲ್ಲಗಳೆದರು. ‘ನಮ್ಮ ಧೀರ ಸಶಸ್ತ್ರ ಪಡೆಗಳು ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ಸಮರ್ಥವಾಗಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿವೆ’ ಎಂದು ಅಬೋಟಾಬಾದ್‌ನಲ್ಲಿ ನಡೆದ ಮಿಲಿಟರಿ ಸಮಾರಂಭವೊಂದರಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.