ADVERTISEMENT

Terror Attack: ಪಹಲ್ಗಾಮ್‌ ದಾಳಿಗೆ ಮೊದಲೇ ಎಚ್ಚರಿಕೆ ನೀಡಿದ್ದ ಗುಪ್ತಚರ ಸಂಸ್ಥೆ

ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರಿಂದ ದಾಳಿ ಸಾಧ್ಯತೆ

ಪಿಟಿಐ
Published 3 ಮೇ 2025, 23:39 IST
Last Updated 3 ಮೇ 2025, 23:39 IST
ಪಹಲ್ಗಾಮ್‌ ದಾಳಿಯ ನಂತರ ಶ್ರೀನಗರದ ದಾಲ್‌ ಸರೋವರ ಸುತ್ತ ಭದ್ರತೆ ಬಿಗಿಗೊಳಿಸಲಾಗಿದೆ –ಪಿಟಿಐ ಚಿತ್ರ
ಪಹಲ್ಗಾಮ್‌ ದಾಳಿಯ ನಂತರ ಶ್ರೀನಗರದ ದಾಲ್‌ ಸರೋವರ ಸುತ್ತ ಭದ್ರತೆ ಬಿಗಿಗೊಳಿಸಲಾಗಿದೆ –ಪಿಟಿಐ ಚಿತ್ರ   

ನವದೆಹಲಿ/ಶ್ರೀನಗರ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ನಡೆಯುವ ಕೆಲವೇ ದಿನಗಳ ಮೊದಲು ಗುಪ್ತಚರ ಸಂಸ್ಥೆಗಳು, ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರಿಂದ ದಾಳಿ ನಡೆಯಬಹುದು ಎಂಬ ಎಚ್ಚರಿಕೆ ನೀಡಿದ್ದವು.

ಅದರಲ್ಲೂ ಮುಖ್ಯವಾಗಿ, ಶ್ರೀನಗರದ ಹೊರವಲಯದಲ್ಲಿರುವ ಝಬರ್ವಾನ್ ವಲಯದ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರನ್ನು ಉಗ್ರರು ಗುರಿ ಮಾಡಿಕೊಳ್ಳಬಹುದು ಎಂದು ಅವು ಎಚ್ಚರಿಸಿದ್ದವು. ಈ ಕಾರಣದಿಂದಾಗಿ ಈ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚು ಮಾಡಲಾಗಿತ್ತು. ಅಲ್ಲದೆ, ಹಿರಿಯ ಪೊಲೀಸ್ ಅಧಿಕಾರಿಗಳು ಶ್ರೀನಗರದಲ್ಲೇ ಇದ್ದು, ದಾಚೀಗಾಮ್‌, ನಿಶಾತ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಉಗ್ರರ ಪತ್ತೆ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಗುಪ್ತಚರ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಶ್ರೀನಗರದ ಹೊರ ವಲಯಗಳಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದವು. ಆದರೆ ಈ ಕಾರ್ಯಾಚರಣೆಗಳಿಂದ ಹೆಚ್ಚಿನ ಪ್ರಯೋಜನ ಆಗಲಿಲ್ಲ. ಹೀಗಾಗಿ ಏಪ್ರಿಲ್‌ 22ರಂದು ಶೋಧ ಕಾರ್ಯಾಚರಣೆ ನಿಲ್ಲಿಸಲಾಯಿತು. ಅದೇ ದಿನ ಉಗ್ರರು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ನಡೆಸಿದರು.

ADVERTISEMENT

ಕಾತ್ರಾದಿಂದ ಶ್ರೀನಗರವನ್ನು ಸಂಪರ್ಕಿಸುವ ಮೊದಲ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ಹಸಿರು ನಿಶಾನೆ ತೋರಬೇಕಿದ್ದ ಸಂದರ್ಭದಲ್ಲಿಯೇ ದುಷ್ಕೃತ್ಯ ನಡೆಸಲು ಉಗ್ರರು ಬಯಸಿದ್ದರು ಎನ್ನುವ ಸೂಚನೆಗಳೂ ಇದ್ದವು ಎಂದು ಮೂಲಗಳು ವಿವರಿಸಿವೆ. 

ಆದರೆ, ಏಪ್ರಿಲ್‌ 19ಕ್ಕೆ ನಿಗದಿಯಾಗಿದ್ದ ಪ್ರಧಾನಿ ಭೇಟಿಯನ್ನು ಕೆಟ್ಟ ಹವಾಮಾನದ ಮುನ್ಸೂಚನೆಯ ಕಾರಣದಿಂದಾಗಿ ಮುಂದೂಡಲಾಯಿತು.

ಸ್ಥಳೀಯ ಇಬ್ಬರು ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಜೊತೆಯಲ್ಲೇ ಇದ್ದರು. ಮೊದಲು ಗುಂಡು ಹಾರಿದ ತಕ್ಷಣ ಅವರು ಪ್ರವಾಸಿಗರನ್ನು ಅಲ್ಲಿನ ತಿಂಡಿ ತಿನಿಸುಗಳ ಮಳಿಗೆಗಳ ಕಡೆ ಕರೆದೊಯ್ದರು. ಅಲ್ಲಿದ್ದ ಇನ್ನಿಬ್ಬರು ಭಯೋತ್ಪಾದಕರು (ಇವರು ಪಾಕಿಸ್ತಾನ ಮೂಲದವರು ಎನ್ನಲಾಗಿದೆ) ಗುಂಡು ಹಾರಿಸಲಾರಂಭಿಸಿದರು, 26 ಜನರ ಸಾವಿಗೆ ಕಾರಣರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗಳಲ್ಲಿ ಕಳವಳಕಾರಿ ಬೆಳವಣಿಗೆಯೊಂದರ ಬಗ್ಗೆ ಅಧಿಕಾರಿಗಳು ಗಮನ ಸೆಳೆದಿದ್ದಾರೆ. ಆಧುನಿಕ ಶಸ್ತ್ರಾಸ್ತ್ರಗಳಾದ ಎಂ–ಸರಣಿಯ ರೈಫಲ್‌ಗಳು, ಸ್ನೈಪರ್‌ ರೈಫಲ್‌ಗಳು ಮತ್ತು ಗುಂಡು ನಿರೋಧಕಗಳನ್ನು ಸೀಳಿಕೊಂಡು ಹೋಗುವ ಗುಂಡುಗಳನ್ನು ಎನ್‌ಕೌಂಟರ್ ನಡೆದ ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ. ನೇಟೊ ಪಡೆಗಳು ಅಫ್ಗಾನಿಸ್ಥಾನದಲ್ಲಿ ಬಿಟ್ಟುಹೋದ ಈ ಶಸ್ತ್ರಾಸ್ತ್ರಗಳು ಉಗ್ರರ ಕೈಗೆ ಸಿಕ್ಕಿವೆ ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸಿಗರು ಬರುತ್ತಿದ್ದಾರೆ ಎಂಬುದನ್ನು ಮಾತ್ರವೇ ಉಲ್ಲೇಖಿಸಿ, ಅಲ್ಲಿ ಶಾಂತಿ ಮನೆಮಾಡುತ್ತಿದೆ ಎಂದು ಹೇಳಬಾರದು ಎನ್ನುವ ಎಚ್ಚರಿಕೆಯನ್ನೂ ಅಧಿಕಾರಿಗಳು ನೀಡಿದ್ದಾರೆ.

ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಮನೆಗಳನ್ನು ಸ್ಫೋಟಿಸುವುದನ್ನು ಈಗ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಮನವಿ ಆಧರಿಸಿ ನಿಲ್ಲಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.