ಸೇನಾ ಕಾರ್ಯಾಚರಣೆ
(ಚಿತ್ರ–@ChinarcorpsIA)
ಶ್ರೀನಗರ: ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾದ ಮೂವರು ಭಯೋತ್ಪಾದಕರು ಇಂದು (ಸೋಮವಾರ) ಶ್ರೀನಗರದ ಹೊರವಲಯದಲ್ಲಿರುವ ದಚಿಗಮ್ ರಾಷ್ಟ್ರೀಯ ಉದ್ಯಾನವನದ ಬಳಿಯ ಲಿದ್ವಾಸ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ ಎಂದು ವರದಿಯಾಗಿದೆ.
ಹರ್ವಾನ್‌ನ ಮುಲ್ನಾರ್ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಗುಪ್ತಚರ ವಿಭಾಗದ ಖಚಿತ ಮಾಹಿತಿ ಆಧರಿಸಿ, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ಮುಂಜಾನೆ 'ಆಪರೇಷನ್ ಮಹಾದೇವ' ಹೆಸರಿನಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ಸೇನೆಯ ಚಿನಾರ್ ಕಾರ್ಪ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಹತ್ಯೆಗೀಡಾದ ಭಯೋತ್ಪಾದಕರು ವಿದೇಶಿ ಪ್ರಜೆಗಳಾಗಿದ್ದು, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್–ಎ–ತಯಬಾ (ಎಲ್‌ಇಟಿ) ಜೊತೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಇವರು, ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಗೆ ಕಾರಣವಾದ ಭಯೋತ್ಪಾದಕರ ಗುಂಪಿನ ಭಾಗವಾಗಿರುವ ಸಾಧ್ಯತೆ ಇದೆ. ಅವರ ಗುರುತು ಪತ್ತೆ ಮತ್ತು ದಾಳಿಯಲ್ಲಿ ಭಾಗಿಯಾಗಿರುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.