ADVERTISEMENT

‘ಅಂಥದ್ದೇನೂ ಆಗಿಲ್ಲ’: ಉಗ್ರರ ಶಿಬಿರ ನಾಶ ಎಂದ ಭಾರತದ ಪ್ರತಿಪಾದನೆ ಅಲ್ಲಗಳೆದ ಪಾಕ್

ಪಿಟಿಐ
Published 21 ಅಕ್ಟೋಬರ್ 2019, 8:50 IST
Last Updated 21 ಅಕ್ಟೋಬರ್ 2019, 8:50 IST
   

ಇಸ್ಲಾಮಾಬಾದ್: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ಶಿಬಿರಗಳನ್ನು ಧ್ವಂಸಗೊಳಿಸಲಾಗಿದೆ ಎನ್ನುವ ಭಾರತೀಯ ಸೇನೆಯ ಮಾತನ್ನು ಪಾಕಿಸ್ತಾನದ ಮಿಲಿಟರಿ ವಕ್ತಾರರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಭಾರತದ ವಾದ ಪೊಳ್ಳು ಎಂಬುದನ್ನು ಸಾಬೀತುಪಡಿಸಲು ಯಾವುದೇ ದೇಶದ ರಾಜತಾಂತ್ರಿಕರು ಅಥವಾ ಮಾಧ್ಯಮ ಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆದೊಯ್ಯಲು ಸಿದ್ಧ ಎಂದು ಪಾಕಿಸ್ತಾನ ಹೇಳಿದೆ.

ಪಾಕ್‌ ಆರಂಭಿಸಿದ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತೀಕಾರ ನೀಡಿದ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರದ ತಂಗಧಾರ್ ಮತ್ತು ಕೇರನ್ ವಲಯಗಳಲ್ಲಿ ಪಾಕಿಸ್ತಾನ ಸೇನೆಯ ಸುಮಾರು 10 ಸೈನಿಕರನ್ನು ಹತ್ಯೆಗೈಯ್ದು,ಮೂರು ಉಗ್ರಗಾಮಿಶಿಬಿರಗಳನ್ನು ಧ್ವಂಸಮಾಡಿತು ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಭಾನುವಾರ ಹೇಳಿದ್ದರು.

ರಾವತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾಕ್ ಸೇನೆಯ ವಕ್ತಾರ ಮೇಜರ್ ಜನರಲ್ ಆಸೀಫ್ ಘಫೂರ್, ಭಾರತೀಯ ಸೇನೆಯ ಮುಖ್ಯಸ್ಥರು ಹೇಳಿರುವಂಥ ಯಾವುದೇ ಶಿಬಿರ ಕಾಶ್ಮೀರ ಗಡಿಯಲ್ಲಿ ಇಲ್ಲ. ಪಾಕಿಸ್ತಾನದಲ್ಲಿರುವ ಭಾರತೀಯ ರಾಜತಾಂತ್ರಿಕರೇ ತಮಗೆ ಇಷ್ಟಬಂದ ವಿದೇಶಿ ರಾಜತಾಂತ್ರಿಕರು ಅಥವಾ ಮಾಧ್ಯಮ ಪ್ರತಿನಿಧಿಗಳನ್ನು ಅಂಥಸ್ಥಳಕ್ಕೆ ಕರೆದೊಯ್ದು ತಮ್ಮ ಸೇನಾ ಮುಖ್ಯಸ್ಥರ ಮಾತನ್ನು ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದ್ದಾರೆ.

‘ಪುಲ್ವಾಮಾ ದಾಳಿಯ ನಂತರ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳು ಪದೇಪದೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳದಿದ್ದರೆ ಶಾಂತಿಗೆ ಭಂಗ ಉಂಟಾಗಬಹುದು’ ಎಂದು ಅವರು ಎಚ್ಚರಿಸಿದ್ದಾರೆ.

ಆಗಿದ್ದೇನು?

ಭಾರತದೊಳಗೆ ನುಸುಳಲುಗಡಿ ನಿಯಂತ್ರಣ ರೇಖೆಯಲ್ಲಿ ಸನ್ನದ್ಧರಾಗಿದ್ದ ಭಯೋತ್ಪಾದರಿಗೆ ರಕ್ಷಣೆ ನೀಡಲೆಂದು ಪಾಕ್ ಸೇನೆಯು ಶನಿವಾರ ಮತ್ತುಭಾನುವಾರ ಭಾರತೀಯ ಸೇನೆಯ ಮುಂಚೂಣಿ ನೆಲೆಗಳು ಮತ್ತು ಗಡಿಗೆ ಹೊಂದಿಕೊಂಡಂತೆ ಇರುವ ಗ್ರಾಮಗಳಮೇಲೆ ಅಪ್ರಚೋದಿತ ಗುಂಡಿನ ದಾಳಿ (ಕವರಿಂಗ್ ಫೈರ್) ಆರಂಭಿಸಿತು.

ಗಡಿನಿಯಂತ್ರಣ ರೇಖೆಯ ತಂಗಧಾರ್ವಲಯದಲ್ಲಿ ಪಾಕ್ ಸೇನೆಯ ದಾಳಿಗೆ ಭಾರತೀಯ ಸೇನೆಯ ಇಬ್ಬರು ಯೋಧರು ಮತ್ತು ಓರ್ವ ನಾಗರಿಕ ಹುತಾತ್ಮರಾದರು. ಐವರು ಗಂಭೀರವಾಗಿ ಗಾಯಗೊಂಡರು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಸೇನೆಯು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಆರಂಭಿಸಿತು.

‘ಭಾರತೀಯ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಅಥ್ಮುಖಂ, ಕುಂದಾಲ್ ಶಹಿ ಮತ್ತು ಜುರಾ ಪ್ರದೇಶಗಳಲ್ಲಿದ್ದ ಉಗ್ರಗಾಗಿ ಶಿಬಿರಗಳು ಧ್ವಂಸಗೊಂಡಿವೆ. ಪಾಕ್ ಸೇನೆಗೂ ಸಾಕಷ್ಟು ಹಾನಿಯಾಗಿದೆ. ಉಗ್ರರನ್ನು ಭಾರತದೊಳಗೆ ನುಗ್ಗಿಸುವ ಯತ್ನ ಕೈಬಿಡದ್ದರೆ ತಕ್ಕ ಶಾಸ್ತಿ ಮಾಡಲಾಗುವುದು’ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.