ADVERTISEMENT

ಭಾರತದ ಗಡಿ ನುಸುಳಿದ ಪಾಕ್ ಹೆಲಿಕಾಪ್ಟರ್‌ಗೆ ಗುಂಡು

ಎಲ್‌ಒಸಿಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2018, 19:50 IST
Last Updated 30 ಸೆಪ್ಟೆಂಬರ್ 2018, 19:50 IST
   

ಶ್ರೀನಗರ: ಪಾಕಿಸ್ತಾನದ ಹೆಲಿಕಾಪ್ಟರ್‌ ಒಂದು ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ವಲಯದಲ್ಲಿ ನಿಯಂತ್ರಣ ರೇಖೆ (ಎಲ್‌ಒಸಿ) ಸಮೀಪ ಹಾರಾಟ ನಡೆಸಿದೆ. ಭಾರತದ ಸೇನೆಯು ಇದನ್ನು ಹೊಡೆದುರುಳಿಸಲುಯತ್ನಿಸಿದೆ.

ದಲ್ಹನ್‌ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ 12.10ರ ವೇಳೆಗೆ ಎಲ್‌ಒಸಿಯ 250 ಮೀಟರ್‌ ಹತ್ತಿರದವರೆಗೂ ಹೆಲಿಕಾಪ್ಟರ್‌ ಬಂದಿತ್ತು. ಹೆಲಿಕಾಪ್ಟರ್‌ ಹಾರಾಡುತ್ತಿದ್ದ ವಿಡಿಯೊವನ್ನು ವ್ಯಕ್ತಿಯೊಬ್ಬರು ಚಿತ್ರಿಸಿಕೊಂಡಿದ್ದಾರೆ. ಪೂಂಛ್‌ನ ಬೆಟ್ಟವೊಂದರ ಸಮೀಪದಲ್ಲಿ ಹೆಲಿಕಾಪ್ಟರ್‌ ಹಾರಾಡುತ್ತಿದ್ದ ದೃಶ್ಯ ವಿಡಿಯೊದಲ್ಲಿ ಇದೆ. ಹೆಲಿಕಾಪ್ಟರ್‌ ಹಾರಾಡುತ್ತಿದ್ದಾಗಲೇ ಗುಂಡು ಹಾರಿಸಿದ ಸದ್ದು ಕೇಳಿಸಿದೆ. ಹೆಲಿಕಾಪ್ಟರ್‌ ಅನ್ನು ಹೊಡೆದುರುಳಿಸಲು ಭಾರತದ ಸೇನೆ ಯತ್ನಿಸಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಮೂಲಗಳು ಹೇಳಿವೆ. ಭಾರತದ ಸೇನೆಯು ಗುಂಡು ಹಾರಿಸಿದ ಬಳಿಕ ಹೆಲಿಕಾಪ್ಟರ್‌ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆಮರಳಿದೆ.

ಈ ಬೆಳವಣಿಗೆಯನ್ನು ಭಾರತೀಯ ಸೇನೆಯು ದೃಢಪಡಿಸಿದೆ. ‘ಹೆಲಿಕಾಪ್ಟರ್‌ ಬಹಳ ಎತ್ತರದಲ್ಲಿ ಹಾರಾಡಿದೆ. ಅದು ನಾಗರಿಕ ಯಾನದ ಹೆಲಿಕಾಪ್ಟರ್‌ ಆಗಿರಬಹುದು. ಅದರತ್ತ ಯೋಧರು ಗುಂಡು ಹಾರಿಸಿದ್ದಾರೆ’ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಪ್ರಧಾನಿ ರಜಾ ಫಾರೂಕ್‌ ಹೈದರ್‌ ಅವರು ಈ ಹೆಲಿಕಾಪ್ಟರ್‌ನಲ್ಲಿ ಇದ್ದರು. ಇತ್ತೀಚೆಗೆ ನಿಧನರಾದ ಸ್ಥಳೀಯ ರಾಜಕಾರಣಿಯೊಬ್ಬರ ಕುಟುಂಬದ ಭೇಟಿಗಾಗಿ ಎಲ್‌ಒಸಿ ಸಮೀಪದ ಗ್ರಾಮಕ್ಕೆ ಅವರು ಹೋಗುತ್ತಿದ್ದರು ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿಮಾಡಿದೆ.

‘ನನ್ನ ಹೆಲಿಕಾಪ್ಟರ್‌ ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ. ಭಾರತದ ಸೈನಿಕರು ಗುಂಡು ಹಾರಿಸಿದಾಗ ಹೆಲಿಕಾಪ್ಟರ್‌ ಎಲ್‌ಒಸಿಯ ಒಳಗೇ ಇತ್ತು’ ಎಂದು ಹೈದರ್‌ ಅವರು ಹೇಳಿದ್ದಾರೆ. ಹೈದರ್‌ ಅವರು ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ. ಹೆಲಿಕಾಪ್ಟರ್‌ಗೂ ಯಾವುದೇಹಾನಿ ಆಗಿಲ್ಲ ಎಂದು ಪಾಕಿಸ್ತಾನದಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ಮೊದಲಲ್ಲ

ಪೂಂಛ್‌ನ ಖಾರಿ ಕರ್ಮಾರಾ ವಲಯದ ಸಮೀಪ ಎಲ್‌ಒಸಿಯಲ್ಲಿ ಪಾಕಿಸ್ತಾನದ ಮೂರು ಎಂಐ–17 ಹೆಲಿಕಾಪ್ಟರ್‌ಗಳು ಫೆಬ್ರುವರಿ 23ರಂದು ಕಾಣಿಸಿಕೊಂಡಿದ್ದವು. ಅವುಗಳಲ್ಲಿ ಒಂದು ಎಲ್‌ಒಸಿ ದಾಟಿ 300 ಮೀಟರ್‌ ಒಳಕ್ಕೆ ಬಂದಿತ್ತು. ಆದರೆ ಗಡಿ ದಾಟಿರಲಿಲ್ಲ. ಉಳಿದೆರಡು ಎಲ್‌ಒಸಿ ಸಮೀಪ ಸ್ವಲ್ಪ ಹೊತ್ತು ಹಾರಾಡಿ ವಾಪಸಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.