ADVERTISEMENT

ಕುಲಭೂಷಣ್‌ಗೆ ರಾಜತಾಂತ್ರಿಕ ನೆರವು

ಕುಲಭೂಷಣ್ ಜಾಧವ್ ಪ್ರಕರಣ: ವಿಯೆನ್ನಾ ಒಪ್ಪಂದದ ಅನುಸಾರ ಕ್ರಮ –ಪಾಕ್‌ ಹೇಳಿಕೆ

ಪಿಟಿಐ
Published 19 ಜುಲೈ 2019, 19:45 IST
Last Updated 19 ಜುಲೈ 2019, 19:45 IST
ಕುಲಭೂಷಣ್‌ ಜಾಧವ್
ಕುಲಭೂಷಣ್‌ ಜಾಧವ್   

ಇಸ್ಲಾಮಾಬಾದ್‌:ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ರಾಜತಾಂತ್ರಿಕ ಕಚೇರಿಯ ಸಲಹೆ, ನೆರವು ಪಡೆಯಲು ದೇಶದ ಕಾನೂನಿನ ಪ್ರಕಾರ ಅವಕಾಶ ಕಲ್ಪಿಸಲಾಗುವುದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.

ವಿಯೆನ್ನಾ ಒಪ್ಪಂದ ಮತ್ತು ರಾಜತಾಂತ್ರಿಕ ಸಂಬಂಧದ ಹಿನ್ನೆಲೆಯಲ್ಲಿ ಭೂಷಣ್‌ಗೆ ಇರುವ ಹಕ್ಕುಗಳ ಕುರಿತು ಅವರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

'ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಕಮಾಂಡರ್‌ ಜಾಧವ್‌ಗೆ ರಾಜತಾಂತ್ರಿಕ ಸಂಬಂಧ ಕುರಿತಂತೆ ವಿಯೆನ್ನಾ ಒಪ್ಪಂದದ ವಿಧಿ 36, ಪ್ಯಾರಾ 1(ಬಿ) ಅನ್ವಯ ಅವರಿಗಿರುವ ಹಕ್ಕುಗಳ ಕುರಿತು ವಿವರಿಸಲಾಗಿದೆ’ ಎಂದು ಸಚಿವಾಲಯ, ತಿಳಿಸಿದೆ. ನೆರವು ನೀಡುವ ಸಂಬಂಧ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಸಹ ಹೇಳಿದೆ.

ADVERTISEMENT

ಜವಾಬ್ದಾರಿಯುತ ರಾಷ್ಟ್ರವಾಗಿ ಪಾಕಿಸ್ತಾನವು ಜಾಧವ್‌ ಅವರಿಗೆ ರಾಜತಾಂತ್ರಿಕ ಸಲಹೆ, ನೆರವು ಪಡೆಯಲು ಪಾಕಿಸ್ತಾನದ ನಿಯಮಗಳ ಅನುಸಾರ ಅವಕಾಶ ಕಲ್ಪಿಸಬಹುದು. ಸಂಬಂಧಿತ ರೂಪರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದೆ.

49 ವರ್ಷ ವಯಸ್ಸಿನ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ಬೇಹುಗಾರಿಕೆ ಮತ್ತು ಭಯೋತ್ಪಾದನೆ ಕೃತ್ಯದ ಆರೋಪದ ಮೇಲೆ ಪಾಕಿಸ್ತಾನದ ಸೇನಾ ನ್ಯಾಯಾಲಯವು ಗಲ್ಲುಶಿಕ್ಷೆ ವಿಧಿಸಿದೆ. ಇದನ್ನು ಪ್ರಶ್ನಿಸಿ ಭಾರತ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಅಂತರರಾಷ್ಟ್ರೀಯ ನ್ಯಾಯಾಲಯ ಈ ಆದೇಶಕ್ಕೆ ತಡೆ ನೀಡಿದೆ.

ಅಂತರರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷ, ನ್ಯಾಯಮೂರ್ತಿ ಅಬ್ದುಲ್‌ ಖವಿ ಅಹ್ಮದ್‌ ಯೂಸುಫ್‌ ನೇತೃತ್ವದ ನ್ಯಾಯಪೀಠ, ತೀರ್ಪು ಮರು ಪರಿಶೀಲಿಸಬೇಕು ಎಂದೂ ಪಾಕಿಸ್ತಾನಕ್ಕೆ ನಿರ್ದೇಶನ ನೀಡಿತ್ತು. ಆದರೆ, ನ್ಯಾಯಪೀಠವು, ಗಲ್ಲುಶಿಕ್ಷೆ ರದ್ದುಪಡಿಸಬೇಕು ಎಂಬ ಭಾರತದ ಮನವಿಯನ್ನು ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.