ADVERTISEMENT

ಗಡಿಯಲ್ಲಿ ಪಾಕ್‌ ಸೇನೆ ಜಮಾವಣೆ: ಜನವಸತಿ ಪ್ರದೇಶಗಳ ಮೇಲೆ ಅಪ್ರಚೋದಿತ ದಾಳಿ

ಪಿಟಿಐ
Published 7 ಮಾರ್ಚ್ 2019, 8:50 IST
Last Updated 7 ಮಾರ್ಚ್ 2019, 8:50 IST
   

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ತ್ವೇಷಮಯ ವಾತಾವರಣ ತಿಳಿಯಾಗುವ ಮೊದಲೇ ಗಡಿಯಲ್ಲಿ ಪಾಕಿಸ್ತಾನದ ಸೇನಾ ಚಟುವಟಿಕೆಗಳು ಏಕಾಏಕಿ ಹೆಚ್ಚಾಗುತ್ತಿವೆ ಎಂದು ಮೂಲಗಳು ಹೇಳಿವೆ.

ಕಾಶ್ಮೀರ ಬಳಿಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ರಹಸ್ಯವಾಗಿ ತನ್ನ ಸೇನೆ ಮತ್ತು ಯುದ್ಧ ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡುತ್ತಿದ್ದು, ಇದು ಭಾರತದ ಗಮನಕ್ಕೆ ಬಂದಿದೆ.

ಅಘ್ಗಾನಿಸ್ತಾನ ಗಡಿಯಲ್ಲಿ ನಿಯೋಜಿಸಲಾಗಿದ್ದ ಸೇನೆಯನ್ನು ಕಾಶ್ಮೀರ ಗಡಿಯತ್ತ ರವಾನಿಸುತ್ತಿದ್ದು, ಭಾರತ ತನ್ನ ಕಣ್ಗಾವಲು ವ್ಯವಸ್ಥೆಯನ್ನು ಚುರುಕುಗೊಳಿಸಿದೆ.

ADVERTISEMENT

ನೌಶೇರಾ ವಲಯದ ಕೃಷ್ಣಾ ಘಾಟಿ ಮತ್ತು ಸುಂದರ್‌ಬನಿ ಸೇರಿದಂತೆ ಕಾಶ್ಮೀರದ ಸೂಕ್ಷ್ಮ ಪ್ರದೇಶಗಳ ಗಡಿಠಾಣೆ ಮತ್ತು ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆ ಅಪ್ರಚೋದಿತ ಶೆಲ್‌ ಮತ್ತು ಗುಂಡಿನ ದಾಳಿ ನಡೆಸುತ್ತಿದೆ. ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತಿದೆ ಎಂದು ಸೇನೆಯ ಪ್ರಕಟಣೆ ತಿಳಿಸಿದೆ.

ಅಪ್ರಚೋದಿತ ದಾಳಿ ಮತ್ತು ದುಸ್ಸಾಹಸಕ್ಕೆ ಕೈ ಹಾಕಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಮಂಗಳವಾರ ರಾತ್ರಿ ಎರಡೂ ಕಡೆಯ ಸೇನಾಧಿಕಾರಿಗಳ ನಡುವೆ ನಡೆದ ಹಾಟ್‌ಲೈನ್‌ ಸಂಭಾಷಣೆ ವೇಳೆ ಭಾರತ ಖಡಕ್‌ ಸಂದೇಶ ರವಾನಿಸಿದೆ.

ಕದನ ವಿರಾಮ ಉಲ್ಲಂಘನೆ
ಜಮ್ಮು
: ಮತ್ತೆ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ, ಜಮ್ಮು ಮತ್ತು ಕಾಶ್ಮೀರದ ರಜೌರಿ ಹಾಗೂ ಪೂಂಚ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಗಡಿ ಠಾಣೆ ಮತ್ತು ಗ್ರಾಮಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ.

ರಜೌರಿ ಜಿಲ್ಲೆಯ ಸುಂದರ್‌ಬನಿ ವಲಯದಲ್ಲಿ ಮಂಗಳವಾರ ರಾತ್ರಿಯಿಂದಲೇ ತೀವ್ರವಾದ ಶೆಲ್‌ ಹಾಗೂ ಗುಂಡಿನ ದಾಳಿ ನಡೆಸಿತ್ತು. ಬುಧವಾರ ಬೆಳಿಗ್ಗೆ ಪೂಂಚ್‌ ಜಿಲ್ಲೆಯ ಘಟಿ ವಲಯದಲ್ಲೂ ದಾಳಿ ನಡೆದಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ದಾಳಿ ನಡೆಸಿದ್ದು ಗಡಿ ಭಾಗದ ನಿವಾಸಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ ಭಾರತದ ಕಡೆಯಲ್ಲಿ ಯಾವುದೇ ಹಾನಿಯ ಕುರಿತು ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.