ಜಮ್ಮು/ನವದೆಹಲಿ: ಅಂತರರಾಷ್ಟ್ರೀಯ ಗಡಿಯ (ಐಬಿ) ಜಮ್ಮು ಸಮೀಪದ ರಾಮಗಢ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಪಡೆಗಳು ಮಂಗಳವಾರ ಬಿಎಸ್‌ಎಫ್ ಯೋಧನ ಕತ್ತು ಸೀಳಿ ಹತ್ಯೆ ಮಾಡಿವೆ. ಈ ಘಟನೆ ಉಭಯ ದೇಶಗಳ ನಡುವೆ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ.
ಈ ಕ್ರೂರ ಘಟನೆಯ ಬಳಿಕ ಅಂತರರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಒಸಿ) ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ. ಈ ಸಂಬಂಧ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಪಾಕಿಸ್ತಾನ ರೇಂಜರ್ಸ್‌ಗೆ ದೂರು ದಾಖಲಿಸಿದೆ.
‘ಹೆಡ್‌ಕಾನ್‌ಸ್ಟೆಬಲ್ ನರೇಂದ್ರ ಕುಮಾರ್ ಅವರ ದೇಹವನ್ನು ಮೂರು ಗುಂಡುಗಳು ಹೊಕ್ಕಿವೆ. ಚೂಪಾದ ಆಯುಧದಿಂದ ಕತ್ತು ಸೀಳಲಾಗಿದೆ. ಈ ಬರ್ಬರ ಕೃತ್ಯದ ಹಿಂದೆ ಪಾಕಿಸ್ತಾನದ ಸೇನೆ ಇದೆ. ಬಿಎಸ್‌ಎಫ್ ಹಾಗೂ ಇತರೆ ರಕ್ಷಣಾ ಪಡೆಗಳು ಸೂಕ್ತ ಸಮಯದಲ್ಲಿ ಪ್ರತೀಕಾರ ತೀರಿಸಿಕೊಳ್ಳಲಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೇಲಿಗೆ ಅಡ್ಡಲಾಗಿ ಆಳೆತ್ತರ ಬೆಳೆದಿದ್ದ ‘ಸರಕಂಡ’ ಹುಲ್ಲು (ನೇಪಿಯರ್) ಕತ್ತರಿಸುವ ಕಾರ್ಯದಲ್ಲಿ ಗಸ್ತುಪಡೆ ತೊಡಗಿತ್ತು. ಈ ವೇಳೆ ಪಾಕಿಸ್ತಾನದ ಕಡೆಯಿಂದ ಗುಂಡಿನ ದಾಳಿ ನಡೆಯಿತು. ಬಿಎಸ್ಎಫ್ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದರೂ ಯೋಧನಿಗೆ ಗುಂಡು ತಗುಲಿತು. ಬೇಲಿಯಲ್ಲಿ ಭಾರತದ ಕಡೆಗಿನ ಪ್ರದೇಶವು ದಟ್ಟವಾದ ಹುಲ್ಲು ಹಾಗೂ ಜೌಗಿನಿಂದ ಕೂಡಿರುವ ಕಾರಣ ಯೋಧನನ್ನು ಪತ್ತೆಹಚ್ಚುವುದು ಬಿಎಸ್ಎಫ್‌ಗೆ ಕಷ್ಟವಾಯಿತು.
ನಾಪತ್ತೆಯಾಗಿದ್ದ ಯೋಧನ ಪತ್ತೆ ಕಾರ್ಯದಲ್ಲಿ ಕೈಜೋಡಿಸುವಂತೆ ಪಾಕಿಸ್ತಾನ ಪಡೆಗೆ ಕೇಳಿಕೊಳ್ಳಲಾಗಿತ್ತು. ಒಂದು ಹಂತದವರೆಗೆ ಜಂಟಿ ಕಾರ್ಯದಲ್ಲಿ ತೊಡಗಿದ್ದ ಪಾಕಿಸ್ತಾನ ಪಡೆ, ಆ ಪ್ರದೇಶವು ಕೆಸರಿನಿಂದ ಆವೃತವಾಗಿದೆ ಎಂದು ಹೇಳಿ ಪತ್ತೆ ಕಾರ್ಯ ಮುಂದುವರಿಸಲು ಹಿಂದೇಟು ಹಾಕಿತ್ತು. ಹೀಗಾಗಿ ಪಾಕಿಸ್ತಾನವನ್ನು ಕೈಬಿಟ್ಟು, ತಮ್ಮ ಸಹೋದ್ಯೋಗಿಗಾಗಿ ಅಪಾಯಕಾರಿ ಕಾರ್ಯಾಚರಣೆಗೆ ಬಿಎಸ್‌ಎಫ್ ಯೋಧರು ಮುಂದಾಗಿದ್ದರು.
ಭಾರತ–ಪಾಕಿಸ್ತಾನ ಗಡಿಯ ಜಮ್ಮುವಿನಲ್ಲಿ ಮೊದಲ ಬಾರಿಗೆ ‘ಸ್ಮಾರ್ಟ್ ಬೇಲಿ’ಯನ್ನು ಗೃಹಸಚಿವ ರಾಜನಾಥ ಸಿಂಗ್ ಅವರು ಉದ್ಘಾಟಿಸಿದ ಮುರಿದಿನವೇ ಈ ಘಟನೆ ನಡೆದಿದೆ.
ಗಂಭೀರವಾಗಿ ಪರಿಗಣಿಸಿದ ಸರ್ಕಾರ
ಬಹುಶಃ ಅಂತರರಾಷ್ಟ್ರೀಯ ಗಡಿಯಲ್ಲಿ ಮೊದಲನೆಯದ್ದು ಎನ್ನಲಾದ ಈ ಬರ್ಬರ ಹತ್ಯೆಯನ್ನು ಕೇಂದ್ರ ಸರ್ಕಾರ, ವಿದೇಶಾಂಗ ಸಚಿವಾಲಯ ಹಾಗೂ ಸೇನಾ ಕಾರ್ಯಾಚರಣೆ ನಿರ್ದೇಶನಾಲಯ (ಡಿಜಿಎಂಒ) ಗಂಭೀರವಾಗಿ ಪರಿಗಣಿಸಿವೆ. ಪಾಕಿಸ್ತಾನದೊಂದಿಗೆ ಈ ವಿಷಯವನನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ.
ಪಾಕ್ ವಿರೋಧಿ ಪ್ರತಿಭಟನೆ
ಯೋಧನ ಹತ್ಯೆ ಖಂಡಿಸಿ ಶಿವಸೇನಾ ಡೊಂಗ್ರಾ ಸಂಘಟನೆ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಹೃದಯಭಾಗವಾದ ರಾಣಿ ಪಾರ್ಕ್ ಪ್ರದೇಶದಲ್ಲಿ ಸಂಘಟನೆ ಮುಖ್ಯಸ್ಥ ಅಶೋಕ್ ಗುಪ್ತಾ ನೇತೃತ್ವದಲ್ಲಿ ಪಾಕಿಸ್ತಾನದ ಧ್ವಜವನ್ನು ಸುಟ್ಟು, ಘೋಷಣೆ ಕೂಗಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.