ಪ್ರಾತಿನಿಧಿಕ ಚಿತ್ರ
ಮುಂಬೈ: ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಏಳು ಅಡ್ವಾನ್ಸ್ಡ್ ಪರ್ಸಿಸ್ಟೆಂಟ್ ಥ್ರೆಟ್ (ಎಪಿಟಿ) ಗುಂಪುಗಳು ಭಾರತದ ಪ್ರಮುಖ ಮೂಲಸೌಕರ್ಯ ವೆಬ್‌ಸೈಟ್‌ಗಳನ್ನು ಗುರಿಯಾಗಿಸಿ 15 ಲಕ್ಷಕ್ಕೂ ಅಧಿಕ ಸೈಬರ್ ದಾಳಿಗಳನ್ನು ನಡೆಸಿವೆ ಎಂದು ಮಹಾರಾಷ್ಟ್ರ ಸೈಬರ್ ವಿಭಾಗ ಹೇಳಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಈ ದಾಳಿಗಳ ತೀವ್ರತೆ ಹೆಚ್ಚಾಗಿದೆ. ಆದಾಗ್ಯೂ ಇವುಗಳಲ್ಲಿ 150 ದಾಳಿಗಳು ಮಾತ್ರ ಯಶಸ್ವಿಯಾಗಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಭಾರತ- ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಬಳಿಕ ಸರ್ಕಾರಿ ವೆಬ್‌ಸೈಟ್‌ಗಳ ಮೇಲಿನ ಸೈಬರ್ ದಾಳಿಗಳು ಸ್ವಲ್ಪ ಕಡಿಮೆಯಾಗಿವೆ. ಆದರೆ ಸಂಪೂರ್ಣವಾಗಿ ನಿಂತಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಮಧ್ಯಪ್ರಾಚ್ಯ ಮತ್ತು ಇಂಡೋನೇಷ್ಯಾ ಮೂಲದ ಗುಂಪುಗಳಿಂದ ಸೈಬರ್ ದಾಳಿ ನಡೆಯುತ್ತಿದೆ ಎಂದು ಮಹಾರಾಷ್ಟ್ರ ಸೈಬರ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಯಶಸ್ವಿ ಯಾದವ್ ಹೇಳಿದ್ದಾರೆ.
APT 36 ( ಪಾಕಿಸ್ತಾನ ಮೂಲ), ಪಾಕಿಸ್ತಾನ ಸೈಬರ್ ಫೋರ್ಸ್, ಟೀಮ್ ಇನ್ಸೇನ್ ಪಿಕೆ, ಮಿಸ್ಟೀರಿಯಸ್ ಬಾಂಗ್ಲಾದೇಶ, ಇಂಡೋ ಹ್ಯಾಕ್ಸ್ ಸೆಕ್, ಸೈಬರ್ ಗ್ರೂಪ್ HOAX 1337, ಮತ್ತು ನ್ಯಾಷನಲ್ ಸೈಬರ್ ಕ್ರೂ ಈ 7 ಹ್ಯಾಕಿಂಗ್ ಗುಂಪುಗಳು ಒಟ್ಟಾಗಿ ಭಾರತೀಯ ವೆಬ್‌ಸೈಟ್‌ಗಳನ್ನು ಗುರಿಯಾಗಿಸಿ 15 ಲಕ್ಷಕ್ಕೂ ಅಧಿಕ ಸೈಬರ್ ದಾಳಿಗಳನ್ನು ನಡೆಸಿವೆ ಎಂದು ಯಾದವ್ ತಿಳಿಸಿದ್ದಾರೆ.
ಭಾರತ- ಪಾಕಿಸ್ತಾನ ಮಿಲಿಟರಿ ಸಂಘರ್ಷಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿದ್ದ 5 ಸಾವಿರಕ್ಕೂ ಹೆಚ್ಚು ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಮಹಾರಾಷ್ಟ್ರ ಸೈಬರ್ ಗುರುತಿಸಿದ್ದು, ಅವುಗಳನ್ನು ಅಳಿಸಿ ಹಾಕಿದೆ. ಜನರು ತಪ್ಪು ಮಾಹಿತಿಯನ್ನು ನಂಬಬೇಡಿ. ವದಂತಿಗಳನ್ನು ಹರಡಬೇಡಿ. ವಿಶ್ವಾಸಾರ್ಹ ಮತ್ತು ಅಧಿಕೃತ ಮೂಲಗಳಿಂದ ಸುದ್ದಿಗಳನ್ನು ಸ್ವೀಕರಿಸುವಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.