ಭಾರತೀಯ ಸೇನೆ ಯೋಧರು
ಪಿಟಿಐ ಸಂಗ್ರಹ ಚಿತ್ರ
ನವದೆಹಲಿ: ಪಾಕಿಸ್ತಾನದ ಸಶಸ್ತ್ರ ಪಡೆಗಳು ಪಶ್ಚಿಮ ಗಡಿ ಪ್ರದೇಶದಲ್ಲಿ ಮೇ 8 ಹಾಗೂ 9ರ ರಾತ್ರಿ ನಡೆಸಿದ ದಾಳಿಗಳನ್ನು 'ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಗಿದೆ' ಎಂದು ಭಾರತೀಯ ಸೇನೆ ಶುಕ್ರವಾರ ಹೇಳಿದೆ.
ಪಾಕ್ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿರುವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ 'ಹಲವು ಬಾರಿ ಕದನ ವಿರಾಮ ಉಲ್ಲಂಘಿಸಿವೆ' ಸೇನೆಯು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್‌ನಲ್ಲಿ ತಿಳಿಸಿದೆ.
ದುಷ್ಕೃತ್ಯಗಳಿಗೆ ಬಲವಾದ ಪ್ರತಿಕ್ರಿಯೆ ನೀಡಲಾಗುವುದು ಎಂಬುದನ್ನು ಪ್ರತಿಪಾದಿಸುವ 'ಆಪರೇಷನ್ ಸಿಂಧೂರ'ದ ಸಣ್ಣ ವಿಡಿಯೊ ತುಣುಕನ್ನೂ ಹಂಚಿಕೊಂಡಿದೆ.
'ಆಪರೇಷನ್ ಸಿಂಧೂರ – ಪಾಕಿಸ್ತಾನ ಸಶಸ್ತ್ರ ಪಡೆಗಳು ಪಶ್ಚಿಮ ಗಡಿಯಲ್ಲಿ 2025 ರ ಮೇ 8–9ರ ಮಧ್ಯರಾತ್ರಿಯಿಡೀ ಡ್ರೋನ್ ಹಾಗೂ ಇತರ ಶಸ್ತ್ರಾಸ್ತ್ರಗಳ ಮೂಲಕವೂ ಅನೇಕ ಬಾರಿ ದಾಳಿ ನಡೆಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ನಿಯಂತ್ರಣ ರೇಖೆಯುದ್ದಕ್ಕೂ ಹಲವು ಸಲ ಕದನ ವಿರಾಮವನ್ನೂ ಉಲ್ಲಂಘಿಸಲಾಗಿದೆ' ಎಂದು ತನ್ನ ಪೋಸ್ಟ್‌ನಲ್ಲಿ ಉಲ್ಲೇಖಸಿದೆ.
ಮುಂದುವರಿದು, 'ಡ್ರೋನ್ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಗಿದೆ. ಕದನ ವಿರಾಮ ಉಲ್ಲಂಘನೆಗಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ' ಎಂದು ತಿಳಿಸಿದೆ.
ಹಾಗೆಯೇ, 'ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಸೇನೆಯು ಬದ್ಧವಾಗಿದೆ. ದುಷ್ಕೃತ್ಯಗಳಿಗೆ ಬಲವಾದ ಪ್ರತಿಕ್ರಿಯೆ ನೀಡಲಾಗುವುದು' ಎಂದು ಪ್ರತಿಪಾದಿಸಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್ 22ರಂದು ನಡೆಸಿದ ಗುಂಡಿನ ದಾಳಿ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಸೃಷ್ಟಿಯಾಗಿದೆ. ಉಗ್ರರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ, ಭಾರತೀಯ ಸೇನೆ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ಬುಧವಾರ ಮುಂಜಾನೆ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿತ್ತು. ಜಾಗತಿಕ ಉಗ್ರ ಮಸೂದ್ ಅಜರ್‌ನ ಕುಟುಂಬದ 10 ಸದಸ್ಯರು, ನಾಲ್ವರು ಆಪ್ತರು ಸೇರಿದಂತೆ 70ರಿಂದ 100 ಭಯೋತ್ಪಾದಕರು ಈ ವೇಳೆ ಹತ್ಯೆಯಾಗಿದ್ದರು.
ಇದೀಗ, ಪಾಕ್ ಪಡೆಗಳೂ ಭಾರತದ ವಿರುದ್ಧ ದಾಳಿ ಯತ್ನ ನಡೆಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.