ನವದೆಹಲಿ: ಪಾಕಿಸ್ತಾನದಿಂದ ಭಾರತಕ್ಕೆ ಆಮದಾಗುವ ಎಲ್ಲಾ ಸರಕುಗಳ ಮೇಲೆ ಕೇಂದ್ರ ಸರ್ಕಾರವು ಶನಿವಾರ ಸಂಪೂರ್ಣವಾಗಿ ನಿರ್ಬಂಧ ಹೇರಿದೆ.
ಕಳೆದ ತಿಂಗಳು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಹಾಗಾಗಿ, ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯವು (ಡಿಜಿಎಫ್‌ಟಿ) ಆದೇಶದಲ್ಲಿ ತಿಳಿಸಿದೆ.
2019ರಲ್ಲಿ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಪಾಕಿಸ್ತಾನದಿಂದ ಆಮದಾಗುವ ಸರಕುಗಳ ಮೇಲೆ ಶೇ 200ರಷ್ಟು ಸುಂಕ ಹೇರಲಾಗಿತ್ತು. ಹೊಸ ಆದೇಶದ ಅನ್ವಯ ಇತರೆ ದೇಶಗಳಿಂದ ಭಾರತಕ್ಕೆ ಪೂರೈಕೆಯಾಗುವ ಪಾಕಿಸ್ತಾನದ ಸರಕುಗಳಿಗೂ ನಿರ್ಬಂಧ ವಿಧಿಸಲಾಗಿದೆ.
2024–25ನೇ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜನವರಿವರೆಗೆ ಭಾರತವು ಪಾಕಿಸ್ತಾನಕ್ಕೆ ₹3,786 ಕೋಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡಿದೆ. ಇದೇ ಅವಧಿಯಲ್ಲಿ ಅಲ್ಲಿಂದ ₹3.55 ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಈ ಪೈಕಿ ಅಂಜೂರದ ಹಣ್ಣು, ತುಳಸಿ ಮತ್ತು ರೋಸ್‌ಮೆರಿ ಗಿಡಮೂಲಿಕೆಗಳು, ರಾಸಾಯನಿಕಗಳು, ಹಿಮಾಲಯನ್ ಪಿಂಕ್ ಸಾಲ್ಟ್ ಸೇರಿದೆ.
ವಿದೇಶಿ ವ್ಯಾಪಾರ ನೀತಿ 2023ರ ಅನ್ವಯ ಪಾಕಿಸ್ತಾನದಿಂದ ನೇರವಾಗಿ ಮತ್ತು ಪರೋಕ್ಷವಾಗಿ ಪೂರೈಕೆಯಾಗುವ ಎಲ್ಲಾ ಸರಕುಗಳಿಗೆ ಈ ಆದೇಶ ಅನ್ವಯಿಸಲಿದೆ ಎಂದು ಡಿಜಿಎಫ್‌ಟಿ ತಿಳಿಸಿದೆ.
ಪಹಲ್ಗಾಮ್ ಘಟನೆ ಬಳಿಕ ಕೇಂದ್ರ ಸರ್ಕಾರವು ಅಟ್ಟಾರಿ ಗಡಿ ಬಂದ್ ಸೇರಿ ಪಾಕಿಸ್ತಾನದ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಆ ದೇಶವೂ ಭಾರತದ ಜತೆಗಿನ ವ್ಯಾಪಾರ ಒಪ್ಪಂದಗಳನ್ನು ರದ್ದುಪಡಿಸಿದೆ.
ಪತ್ರ ವ್ಯವಹಾರ ಅಮಾನತು
ಪಾಕಿಸ್ತಾನದ ಜೊತೆಗಿನ ಎಲ್ಲ ಬಗೆಯ ಪತ್ರ ಮತ್ತು ಪಾರ್ಸೆಲ್ ವ್ಯವಹಾರಗಳನ್ನು ಭಾರತವು ಶನಿವಾರದಿಂದ ಅಮಾನತಿನಲ್ಲಿ ಇರಿಸಿದೆ. ಈ ಅಮಾನತು ಆದೇಶವು ವಾಯುಮಾರ್ಗದ ಮೂಲಕ, ರಸ್ತೆ ಮೂಲಕ ನಡೆಯುವ ಪತ್ರ, ಪಾರ್ಸೆಲ್ ವ್ಯವಹಾರಗಳಿಗೆ ಅನ್ವಯವಾಗುತ್ತದೆ. ಇದರ ಜೊತೆಯಲ್ಲೇ, ಪಾಕಿಸ್ತಾನದ ಯಾವುದೇ ಹಡಗು ಭಾರತದ ಬಂದರು ಪ್ರವೇಶಿಸುವಂತಿಲ್ಲ ಎಂದು ಕೂಡ ಆದೇಶಿಸಲಾಗಿದೆ.
ಸಂವಹನ ಸಚಿವಾಲಯದ ಅಧೀನದಲ್ಲಿ ಕಾರ್ಯಾಚರಣೆ ನಡೆಸುವ ಅಂಚೆ ಇಲಾಖೆಯು, ಪತ್ರ ಮತ್ತು ಪಾರ್ಸೆಲ್ ವ್ಯವಹಾರಗಳ ಅಮಾನತು ಆದೇಶ ಹೊರಡಿಸಿದೆ.
ಪಾಕಿಸ್ತಾನದ ಹಡಗುಗಳು ಭಾರತದ ಬಂದರು ಪ್ರವೇಶಿಸುವಂತಿಲ್ಲ ಎಂಬ ಆದೇಶ ಹೊರಡಿಸಿರುವುದಷ್ಟೇ ಅಲ್ಲದೆ, ಭಾರತದ ಹಡಗುಗಳು ಕೂಡ ಪಾಕಿಸ್ತಾನದ ಬಂದರಿಗೆ ತೆರಳುವಂತಿಲ್ಲ ಎಂದು ಆದೇಶಿಸಲಾಗಿದೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬಂದಿದೆ. ‘ಭಾರತದ ಆಸ್ತಿಗಳು, ಸರಕುಗಳು ಮತ್ತು ಸಂಬಂಧಪಟ್ಟ ಮೂಲಸೌಕರ್ಯವನ್ನು ರಕ್ಷಿಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಕೇಂದ್ರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.