ರಾಜನಾಥ್ ಸಿಂಗ್
ಕೃಪೆ: ಪಿಟಿಐ
ನವದೆಹಲಿ: 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ವೇಳೆ ಭಾರತ ನೀಡಿರುವ ತೀವ್ರ ಹೊಡೆತದಿಂದ ತತ್ತರಿಸಿರುವ ಪಾಕಿಸ್ತಾನ, ಇನ್ನೂ ಚೇತರಿಸಿಕೊಳ್ಳುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಬುಧವಾರ (ಅಕ್ಟೋಬರ್ 22ರಂದು) ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಸಿಂಗ್, 'ಆಪರೇಷನ್ ಸಿಂಧೂರ' ರಕ್ಷಣಾ ಕಾರ್ಯಾಚರಣೆಯು ಭಾರತದ ಮೂರೂ ಸೇನೆಗಳ ಸಮನ್ವಯದ 'ಅಸಾಧಾರಣ' ಪ್ರದರ್ಶನವೆಂದು ಬಣ್ಣಿಸಿದ್ದಾರೆ. ಹಾಗೆಯೇ, ಭವಿಷ್ಯದಲ್ಲಿ ತಲೆದೋರುವ ಸವಾಲುಗಳನ್ನು ಎದುರಿಸಲು ಸಂಘಟಿತ ಹಾಗೂ ಪೂರ್ವಭಾವಿ ಕಾರ್ಯತಂತ್ರಗಳನ್ನು ರೂಪಿಸುವ ದೇಶದ ಸಂಕಲ್ಪವನ್ನು ಈ ಕಾರ್ಯಾಚರಣೆ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಪುನರುಚ್ಚರಿಸಿದ್ದಾರೆ.
ಸದ್ಯದ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ಯುದ್ಧ ತಂತ್ರಗಳು ಸಾಕಾಗುವುದಿಲ್ಲ. ಏಕೆಂದರೆ, ಯುದ್ಧವು ಈಗ ಗಡಿಗಳಲ್ಲಿ ಮಾತ್ರವೇ ನಡೆಯುವುದಿಲ್ಲ. ಹೊಸ ರೂಪ ಪಡೆದುಕೊಂಡಿವೆ. ಅದರ ಸ್ವರೂಪ ಬದಲಾಗಿವೆ. ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸುವ ಸಲುವಾಗಿ, ಭವಿಷ್ಯದ ಸವಾಲುಗಳಿಗೆ ಸಜ್ಜಾಗುವಂತೆ ಮಿಲಿಟರಿಯಲ್ಲಿ ಸುಧಾರಣೆಗಳನ್ನು ತರಲು ಸರ್ಕಾರವು ಹಲವು ದೃಢ ಹಾಗೂ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಏಪ್ರಿಲ್ 22ರಂದು ನಡೆದ ಈ ದಾಳಿ ವೇಳೆ 26 ಮಂದಿ ಮೃತಪಟ್ಟಿದ್ದರು.
ಇದಕ್ಕೆ ಪ್ರತಿಯಾಗಿ ಭಾರತೀಯ ಪಡೆಗಳು ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು 'ಆಪರೇಷನ್ ಸಿಂಧೂರ' ನಡೆಸಿದ್ದವು. ಅದರ ಬೆನ್ನಲ್ಲೇ, ಪಾಕಿಸ್ತಾನ ಸೇನೆ ಭಾರತದ ಮೇಲೆ ದಾಳಿ ಮಾಡಿತ್ತು.
ಪಾಕ್ ದಾಳಿಯನ್ನು ಭಾರತ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ವೇಳೆ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ತೀವ್ರಗೊಂಡಿತ್ತು.
ಮೇ 10ರಂದು ಕದನ ವಿರಾಮ ಘೋಷಣೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.