ADVERTISEMENT

ಉಗ್ರರಿಗೆ ಮಾಹಿತಿ ನೀಡಲು ಡ್ರಗ್ಸ್ ವ್ಯಸನಿಗಳನ್ನು ಕಳುಹಿಸುತ್ತಿರುವ ಪಾಕ್

ಪಿಟಿಐ
Published 8 ಡಿಸೆಂಬರ್ 2024, 12:35 IST
Last Updated 8 ಡಿಸೆಂಬರ್ 2024, 12:35 IST
   

ನವದೆಹಲಿ: ಭಾರತದ ಜೈಲುಗಳಲ್ಲಿರುವ ಉಗ್ರರಿಗೆ ಮಾಹಿತಿ ತಲುಪಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಡ್ರಗ್ಸ್ ವ್ಯಸನಿಗಳು ಅಥವಾ ಮಾನಸಿಕ ಅಸ್ವಸ್ಥರ ರೀತಿ ಬಿಂಬಿಸಿ ಕೆಲವರನ್ನು ದೇಶಕ್ಕೆ ಒಳನುಸುಳುವಂತೆ ಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷದ ಜುಲೈನಿಂದ ಆ ರೀತಿಯ 10 ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪಾಕಿಸ್ತಾನದಿಂದ ಒಳನುಸುಳುತ್ತಿದ್ದಾರೆ. ಈ ಪೈಕಿ ಹಲವರನ್ನು ಜಮ್ಮು, ಪಂಜಾಬ್ ಮತ್ತು ರಾಜಸ್ಥಾನದ ಜೈಲುಗಳಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವ್ಯಕ್ತಿಗಳು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್‌ನ (ಐಎಸ್‌ಐ) ಕೊರಿಯರ್‌ ರೀತಿ ಕೆಲಸ ಮಾಡುತ್ತಿದ್ದರು ಎಂದು ಭದ್ರತಾ ಸಂಸ್ಥೆಗಳು ಶಂಕಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ವ್ಯಕ್ತಿಗಳು ಭದ್ರತಾ ಸಿಬ್ಬಂದಿಯ ಪ್ರಶ್ನೆಗಳಿಗೆ ಉತ್ತರ ಕೊಡದೇ ಪ್ರತಿರೋಧ ಒಡ್ಡುವ ತಂತ್ರಗಳಲ್ಲಿ ತರಬೇತಿ ಪಡೆದಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.

ಬಂಧಿತರ ನಡವಳಿಕೆಗಳು, ಪ್ರಶ್ನೆಗೆ ಸೂಕ್ತ ಉತ್ತರ ನೀಡದೆ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಗಮನಿಸಿದರೆ ಅವರ ಒಳನುಸುಳುವಿಕೆ ಹಿಂದೆ ಬೇರೆಯದ್ದೇ ಯೋಜನೆ ಇರುವುದು ಸ್ಪಷ್ಟವಾಗಿದೆ. ಮೊಬೈಲ್ ಮತ್ತು ಇಂಟರ್‌ನೆಟ್ ಮೂಲಕ ಜೈಲಲ್ಲಿರುವ ಕೈದಿಗಳಿಗೆ ಮಾಹಿತಿ ನೀಡುವುದರಿಂದ ತಮ್ಮ ಯೋಜನೆ ಸೋರಿಕೆಯಾಗುವ ಆತಂಕದಿಂದ ಐಎಸ್‌ಐ ಹೊಸ ಮಾರ್ಗ ಹಿಡಿದಂತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದಕ್ಕಾಗಿ ಐಎಸ್‌ಐ ಮಹಿಳೆಯರು, ಮಕ್ಕಳನ್ನೇ ಬಳಸಿಕೊಳ್ಳುತ್ತಿರುವುದು ಪತ್ತೆಯಾಗಿದೆ.

ಪಂಜಾಬ್‌ನಲ್ಲಿ ಓರ್ವ ಅಪ್ರಾಪ್ತನನ್ನ ಬಂಧಿಸಿದ್ದ ಅಧಿಕಾರಿಗಳಿಗೆ ಪರಿಶೀಲನೆ ವೇಳೆ ಅರೇಬಿಕ್ ಭಾಷೆಯ ಪತ್ರವೊಂದು ಪತ್ತೆಯಾಗಿತ್ತು. ಆದರೆ, ಅದು ಸಾಮಾನ್ಯ ಅರೇಬಿಕ್‌ನಂತೆ ಓದಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.

ಡ್ರಗ್ಸ್ ಕಳ್ಳಸಾಗಣೆಗೂ ಈ ಒಳನುಸುಳುವಿಕೆಗೂ ಲಿಂಕ್ ಇದೆ. ರಾಜಸ್ಥಾನದ ಬಿಜನೂರ್‌ನಲ್ಲಿ ಬಂಧಿತನಾಗಿದ್ದ ಮಾನಸಿಕ ಅಸ್ವಸ್ಥನಂತೆ ನಟಿಸುತ್ತಿದ್ದ ಪಾಕಿಸ್ತಾನದ ಪ್ರಜೆ, ಇಬ್ಬರು ಮಾದಕ ವಸ್ತು ವ್ಯಾಪಾರಿಗಳು ತನ್ನನ್ನು ಕಳುಹಿಸಿದ್ದರು. ಮಾದಕವಸ್ತು ಕಳ್ಳಸಾಗಣೆಗೆ ಅನುಕೂಲಕರ ವಾತಾವರಣ ಪತ್ತೆ ಮಾಡಲು ಗಡಿಯಲ್ಲಿ ಸೇನೆ ನಿಯೋಜನೆಯ ಮಾಹಿತಿ ತರಲು ಸೂಚಿಸಿದ್ದರು ಎಂದು ಆ ವ್ಯಕ್ತಿ ವಿಚಾರಣೆ ವೇಳೆ ಹೇಳಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಲಾಹೋರ್ ಮೂಲದ ಮೊಹಮ್ಮದ್ ಅಸಾದ್ ಎಂಬಾತ ಮೋಟಾರ್ ಸೈಕಲ್ ಓಡಿಸಿಕೊಂಡು ಗಡಿಯ ಶೂನ್ಯವಲಯಕ್ಕೆ ಬಂದಿದ್ದ. ಅಲ್ಲದೆ, ಅಲ್ಲಿಯೇ ನಿಂತು ಭದ್ರತಾ ಪಡೆ ಬಂಧಿಸಲೆಂದೇ ಆತ ಕಾಯುತ್ತಿದ್ದಂತೆ ಅನುಮಾನ ವ್ಯಕ್ತವಾಗಿತ್ತು. ತನಿಖೆ ವೇಳೆ ಪ್ರೇಯಸಿ ಜೊತೆ ಜಗಳ ಆಡಿಕೊಂಡು ಬಂದಿದ್ದಾಗಿ ಹೇಳಿದ್ದ. ಈಗ ಜೈಲಿನಲ್ಲಿರುವ ಆತ ಐಎಸ್‌ಐನ ಮಾಹಿತಿದಾರನಂತೆ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆತನ ಮರುವಿಚಾರಣೆಗೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.