
ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿರುವಂತೆಯೇ, ಮತದಾರರಿಗೆ ಭರಪೂರ ಆಶ್ವಾಸನೆಗಳನ್ನು ನೀಡುವುದು ಕೂಡ ಹೆಚ್ಚುತ್ತಿದೆ.
‘ಒಂದು ವೇಳೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ, ಪಂಚಾಯಿತಿ ಪ್ರತಿನಿಧಿಗಳ ಮಾಸಿಕ ಭತ್ಯೆ, ಪಿಂಚಣಿ ಹಾಗೂ ವಿಮಾ ಮೊತ್ತವನ್ನು ಹೆಚ್ಚಿಸಲಾಗುವುದು’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಂಚಾಯಿತಿ ಪ್ರತಿನಿಧಿಗಳ ವಿಮೆಯನ್ನು ₹50 ಲಕ್ಷಕ್ಕೆ ಹೆಚ್ಚಿಸಲಾಗುವುದು’ ಎಂದದರು.
‘ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ಪಂಚಾಯಿತಿಗಳ ಪ್ರತಿನಿಧಿಗಳ ಮಾಸಿಕ ಭತ್ಯೆಯನ್ನು ದ್ವಿಗುಣಗೊಳಿಸಲಾಗುವುದು. ಪಡಿತರ ವಿತರಕರಿಗೆ ನೀಡುವ ಕಮಿಷನ್ ಅನ್ನು ಕೂಡ ಹೆಚ್ಚಿಸಲಾಗುವುದು’ ಎಂದು ತೇಜಸ್ವಿ ಯಾದವ್ ಹೇಳಿದರು.
‘ಕ್ಷೌರಿಕರು, ಕುಂಬಾರರು ಹಾಗೂ ಬಡಗಿಗಳಿಗೆ ₹5 ಲಕ್ಷ ಬಡ್ಡಿರಹಿತ ಸಾಲವನ್ನು ಸಹ ನೀಡಲಾಗುವುದು’ ಎಂದರು.
ಪಂಜಾಯತ್ ರಾಜ್ ವ್ಯವಸ್ಥೆಯಡಿ ಬಿಹಾರದಲ್ಲಿ ಜಿಲ್ಲಾ ಪರಿಷತ್, ಪಂಚಾಯಿತಿ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಇವೆ. ಈ ಮೂರು ಹಂತದ ಪಂಚಾಯಿತಿಗಳ ಪ್ರತಿನಿಧಿಗಳು ಹಾಗೂ ವಾರ್ಡ್ ಸದಸ್ಯರ ಮಾಸಿಕ ಭತ್ಯೆ ಹಾಗೂ ಇತರ ಸೌಲಭ್ಯಗಳನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಜೂನ್‌ನಲ್ಲಿ ಹೆಚ್ಚಳ ಮಾಡಿದ್ದರು.
ಜಿಲ್ಲಾ ಪರಿಷತ್ ಅಧ್ಯಕ್ಷರ ಮಾಸಿಕ ಭತ್ಯೆಯನ್ನು ₹20 ಸಾವಿರದಿಂದ ₹30 ಸಾವಿರಕ್ಕೆ ಹೆಚ್ಚಿಸಲಾಗಿದೆ. ಉಪಾಧ್ಯಕ್ಷರ ಭತ್ಯೆ ₹10 ಸಾವಿರದಿಂದ ₹20 ಸಾವಿರ, ಗ್ರಾಮ ಪಂಚಾಯಿತಿ ಅಧ್ಯಕ್ಷರ ಭತ್ಯೆಯನ್ನು ₹5 ಸಾವಿರದಿಂದ ₹7,500ಕ್ಕೆ ಹೆಚ್ಚಿಸಲಾಗಿದೆ.
ಟೊಳ್ಳು ಭರವಸೆ ಎಂಬುದು ಜನರಿಗೆ ಗೊತ್ತು: ಜೆಡಿಯು
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ನೀಡಿರುವ ಭರವಸೆಗಳ ಕುರಿತು ಪ್ರತಿಕ್ರಿಯಿಸಿರುವ ಜೆಡಿಯು ವಕ್ತಾರ ನೀರಜ್ ಕುಮಾರ್‘ಇವೆಲ್ಲ ಟೊಳ್ಳು ಭರವಸೆಗಳು ಎಂಬುದು ಬಿಹಾರ ಜನರಿಗೆ ಗೊತ್ತಿದೆ’ ಎಂದು ಹೇಳಿದ್ದಾರೆ. ‘ಭ್ರಷ್ಟಾಚಾರ ಹಾಗೂ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ತೇಜಸ್ವಿ ವಿರುದ್ಧ 27 ಪ್ರಕರಣಗಳಿವೆ. ಅವರ ವಿರುದ್ಧ ಬಿಹಾರ ದೆಹಲಿ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಲ್ಲಿ ಪ್ರಕರಣ ದಾಖಲಾಗಿವೆ’ ಎಂದರು. ‘ಶಾಸಕರಾಗಿ 10 ವರ್ಷ ಕಾರ್ಯ ನಿರ್ವಹಿಸಿರುವ ತೇಜಸ್ವಿ ₹13.41 ಕೋಟಿ ಮೌಲ್ಯದ ಆಸ್ತಿ ಗಳಿಸಿದ್ದು ಹೇಗೆ ಎಂಬುದನ್ನು ಬಿಹಾರದ ಜನತೆ ತಿಳಿದುಕೊಳ್ಳಲು ಬಯಸಿದ್ದಾರೆ’ ಎಂದೂ ನೀರಜ್ ಕುಮಾರ್ ಹೇಳಿದ್ದಾರೆ.
ವಕ್ಫ್ ಕಾಯ್ದೆ ರದ್ದತಿ: ಭರವಸೆ ಬಿಹಾರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ರದ್ದುಪಡಿಸಲಾಗುವುದು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದರು. ಮುಸ್ಲಿಮರ ಸಂಖ್ಯೆ ಹೆಚ್ಚು ಇರುವ ಪ್ರದೇಶಗಳಾದ ಕಟಿಹಾರ ಕಿಶನ್‌ಗಂಜ್ ಅರಾರಿಯಾ ಜಿಲ್ಲೆಗಳಲ್ಲಿ ಸರಣಿ ಬಹಿರಂಗ ಸಭೆಗಳಲ್ಲಿ ಅವರು ಮಾತನಾಡಿದರು. ‘ನನ್ನ ತಂದೆ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಕೋಮುವಾದಿ ಶಕ್ತಿಗೊಳೊಂದಿಗೆ ಎಂದಿಗೂ ರಾಜಿ ಆಗಲಿಲ್ಲ. ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂತಹ ಶಕ್ತಿಗಳನ್ನು ಬೆಂಬಲಿಸಿದರು. ಹೀಗಾಗಿಯೇ ಆರ್‌ಎಸ್‌ಎಸ್ ಹಾಗೂ ಅದರ ಅಂಗಸಂಸ್ಥೆಗಳು ಬಿಹಾರ ಹಾಗೂ ದೇಶದ ಇತರೆಡೆ ಕೋಮುದ್ವೇಷ ಹರಡುತ್ತಿವೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.