ಕೇರಳದ ಕೋಯಿಕ್ಕೋಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರವಾದಿ ಪಾಂಡುರಂಗ ಹೆಗಡೆ ಅವರಿಗೆ ‘ವೀರೇಂದ್ರ ಕುಮಾರ್ ರಾಷ್ಟ್ರೀಯ ಚಿಂತನಾ ನಾಯಕತ್ವ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ‘ಮಾತೃಭೂಮಿ’ ವ್ಯವಸ್ಥಾಪಕ ನಿರ್ದೇಶಕ ಎಂ.ವಿ.ಶ್ರೇಯಾಂಶ್‌ಕುಮಾರ್, ಹಿರಿಯ ಪತ್ರಕರ್ತ ಎನ್.ರಾಮ್ ಕಾರ್ಯಕ್ರಮದಲ್ಲಿ ಇದ್ದರು.
–ಪಿಟಿಐ ಚಿತ್ರ
ಕೋಯಿಕ್ಕೋಡ್: ಅಪ್ಪಿಕೋ ಚಳವಳಿ ಸಂಸ್ಥಾಪಕ, ಪರಿಸರವಾದಿ ಮತ್ತು ಸಾಮಾಜಿಕ ಹೋರಾಟಗಾರ ಪಾಂಡುರಂಗ ಹೆಗಡೆ ಅವರು ಅರಣ್ಯ ಸಂರಕ್ಷಣೆಯಲ್ಲಿನ ಅಮೂಲ್ಯ ಸೇವೆ ಮತ್ತು ಸಮೂಹ ಆಧಾರಿತ ಪರಿಸರ ಚಟುವಟಿಕೆಗಳಿಗಾಗಿ ‘ಸಂಸದ ವೀರೇಂದ್ರ ಕುಮಾರ್ ಸ್ಮಾರಕ ರಾಷ್ಟ್ರೀಯ ಚಿಂತನಾ ನಾಯಕತ್ವ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಕೇರಳದ ಲೇಖಕ, ರಾಜಕಾರಣಿ ಮತ್ತು ‘ಮಾತೃಭೂಮಿ’ ಪತ್ರಿಕೆಯ ಮಾಜಿ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಂ.ಪಿ.ವೀರೇಂದ್ರ ಕುಮಾರ್ ಅವರ ಐದನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಲ ಸಂರಕ್ಷಣಾವಾದಿ ಮತ್ತು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜಸ್ಥಾನದ ತರುಣ್ ಭಾರತ್ ಸಂಘದ ರಾಜೇಂದ್ರ ಸಿಂಗ್ ಅವರು ಪಾಂಡುರಂಗ ಹೆಗಡೆ ಅವರಿಗೆ ಚೊಚ್ಚಲ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಪ್ರಶಸ್ತಿಯು ಪ್ರಶಂಸಾ ಪತ್ರ, ಫಲಕ ಮತ್ತು ₹5 ಲಕ್ಷ ನಗದು ಗೌರವವನ್ನು ಒಳಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶಿರಸಿ ಭಾಗದ ಪಶ್ಚಿಮ ಘಟ್ಟಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ‘ಪ್ರಕೃತಿ’ ಪರಿಸರ ಸಂಸ್ಥೆ ಸದಸ್ಯರೊಂದಿಗೆ ಪ್ರಶಸ್ತಿ ಮೊತ್ತವನ್ನು ಹಂಚಿಕೊಳ್ಳುವುದಾಗಿ ಪಾಂಡುರಂಗ ಹೆಗಡೆ ಅವರು ಪ್ರಕಟಿಸಿದರು.
ಅಪ್ಪಿಕೋ ಚಳವಳಿಯ ಸಂಸ್ಥಾಪಕ ಪಾಂಡುರಂಗ ಹೆಗಡೆ ಅವರು ಜೈವಿಕ ಸಂರಕ್ಷಣೆ ಮತ್ತು ಸುಸ್ಥಿರ ಜೀವನ ಪದ್ಧತಿಗಳ ಉಳಿವಿನ ಹೋರಾಟದಲ್ಲಿ ದಶಕಗಳಿಂದಲೂ ಮುಂಚೂಣಿ ಪಾತ್ರ ವಹಿಸಿದ್ದಾರೆ.
ಅಮೃತಾ ದೇವಿ ಬಿಷ್ಣೋಯಿ ಮತ್ತು ಸುಂದರ್ ಲಾಲ್ ಬಹುಗುಣ ಅವರ ಚಿಪ್ಕೋ ಚಳವಳಿಯಿಂದ ಪ್ರೇರಿತರಾಗಿ ಉತ್ತರ ಕನ್ನಡದಲ್ಲಿ ಪಾಂಡುರಂಗ ಹೆಗಡೆ ಅವರು ಅಪ್ಪಿಕೋ ಚಳವಳಿ ಆರಂಭಿಸಿದ್ದರು. ಇದು ಅರಣ್ಯ ನಾಶದ ವಿರುದ್ಧ ತಳಮಟ್ಟದ ಹೋರಾಟವಾಗಿ ಪರಿವರ್ತನೆಯಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ‘ದಿ ಹಿಂದೂ’ ಪತ್ರಿಕೆಯ ಮಾಜಿ ಮುಖ್ಯ ಸಂಪಾದಕ ಎನ್.ರಾಮು ಅವರು, ಮಾಧ್ಯಮ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ವೀರೇಂದ್ರ ಕುಮಾರ್ ಅವರು ನಡೆಸಿದ ದಿಟ್ಟತನದ ಹೋರಾಟವನ್ನು ಸ್ಮರಿಸಿಕೊಂಡರು. ಅಲ್ಲದೇ ಐದು ದಶಕಗಳ ತಮ್ಮ ಮತ್ತು ಅವರ ವೃತ್ತಿಪರ ಮತ್ತು ವೈಯಕ್ತಿಕ ಸ್ನೇಹವನ್ನು ನೆನಪಿಸಿಕೊಂಡರು.
‘ಮಾತೃಭೂಮಿ’ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ಸಂಪಾದಕ ಪಿ.ವಿ.ಚಂದ್ರನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಎಂ.ವಿ.ಶ್ರೇಯಾಂಶ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಂದನಾ ಶಿವ, ಜೈರಾಮ್ ರಮೇಶ್, ಮಲಯಾಳಂ ವಿಮರ್ಶಕ ಪ್ರೊ.ಎಂ.ಕೆ.ಸಾನು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.