ADVERTISEMENT

ಪ್ರತಿಭಟನಾನಿರತ ರೈತರ ಜೊತೆ ಸಂಜೆ 5ಕ್ಕೆ ಕೇಂದ್ರ ಸಚಿವರ 3ನೇ ಸುತ್ತಿನ ಮಾತುಕತೆ

ಪಿಟಿಐ
Published 15 ಫೆಬ್ರುವರಿ 2024, 4:38 IST
Last Updated 15 ಫೆಬ್ರುವರಿ 2024, 4:38 IST
   

ಚಂಡೀಗಢ: ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ‘ದೆಹಲಿ ಚಲೋ’ ನಡೆಸುತ್ತಿರುವ ರೈತರ ಜೊತೆ ಇಂದು ಕೇಂದ್ರದ ಮೂವರು ಸಚಿವರು ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.

ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಸಂಜೆ 5 ಗಂಟೆಗ ರೈತರ ಜೊತೆ ಅವರ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಇದು ರೈತರು ಮತ್ತು ಸರ್ಕಾರದ ನಡುವಿನ ಮೂರನೇ ಸುತ್ತಿನ ಮಾತುಕತೆಯಾಗಿದ್ದು, ಫೆಬ್ರುವರಿ 8 ಮತ್ತು 12ರಂದು ನಡೆದ ಸಭೆಗಳು ಯಾವುದೇ ಪರಿಹಾರ ಕಂಡುಹಿಡಿಯುವಲ್ಲಿ ವಿಫಲವಾಗಿದ್ದವು.

ADVERTISEMENT

ತಮ್ಮ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ‘ದೆಹಲಿ ಚಲೋ’ ನಡೆಸುತ್ತಿರುವ ರೈತರು, ಪಂಜಾಬ್ ಮತ್ತು ಹರಿಯಾಣದ ಶಂಭು ಮತ್ತು ಖನೌರಿ ಗಡಿಗಳಲ್ಲಿ ಸಮಾವೇಶಗೊಳ್ಳುತ್ತಿದ್ದಾರೆ.

ಸಂಜೆ ಸಭೆ ಮುಗಿಯುವವರೆಗೂ ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವ ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದು ರೈತ ನಾಯಕರು ತಿಳಿಸಿದ್ದಾರೆ.

ಈ ನಡುವೆ, ಭಾರ್ತಿ ಕಿಸಾನ್ ಯೂನಿಯನ್ (ಏಕ್ತಾ ಉಗ್ರನ್) ಮತ್ತು ಬಿಕೆಯು ದಕೌಂಡ (ಧನೇರ್) ಇಂದು ಚಂಡೀಗಢ ರಾಜ್ಯದಲ್ಲಿ 'ರೈಲ್ ರೋಕೋ' ಘೋಷಿಸಿವೆ. ಮಧ್ಯಾಹ್ನ 12 ರಿಂದ ಸಂಜೆ 4ರವರೆಗೆ ಏಳು ಸ್ಥಳಗಳಲ್ಲಿ ರೈತರು ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.