ADVERTISEMENT

ಪತ್ರಕರ್ತರಿಗೆ ಎಕ್ಸ್-ಗ್ರೇಷಿಯಾ ಪರಿಷ್ಕರಿಸಲು ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 14:15 IST
Last Updated 2 ಸೆಪ್ಟೆಂಬರ್ 2021, 14:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪತ್ರಕರ್ತರ ಕಲ್ಯಾಣ ಯೋಜನೆಯಡಿ (ಜೆಡಬ್ಲ್ಯೂಎಸ್) ಚಾಲ್ತಿಯಲ್ಲಿರುವ ಪ್ರಸಕ್ತ ಮಾರ್ಗಸೂಚಿಗಳನ್ನು ಪರಿಶೀಲಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 12 ಸದಸ್ಯರ ಸಮಿತಿಯನ್ನು ರಚಿಸಿದೆ.

ಪ್ರಸಾರ ಭಾರತಿ ಮಂಡಳಿಯ ಸದಸ್ಯರಾದ ಅಶೋಕ್ ಕುಮಾರ್ ಟಂಡನ್ ಅವರು ಈ ಸಮಿತಿಗೆ ಅಧ್ಯಕ್ಷರಾಗಿದ್ದಾರೆ.

‘ದಿ ವೀಕ್‌’ ಸ್ಥಾನಿಕ ಸಂಪಾದಕ ಸಚ್ಚಿದಾನಂದ ಮೂರ್ತಿ, ಹಿರಿಯ ಪತ್ರಕರ್ತ ಶೇಖರ್‌ ಅಯ್ಯರ್‌, ಪಾಂಚಜನ್ಯ ಸಂಪಾದಕ ಹಿತೇಶ್‌ ಶಂಕರ್‌, ಅಮಿತಾಬ್‌ ಸಿನ್ಹಾ (ನ್ಯೂಸ್‌ 18), ಶಿಶಿರ್‌ ಸಿನ್ಹಾ (ಬ್ಯುಸಿನೆಸ್‌ ಲೈನ್‌), ರವೀಂದರ್ ಕುಮಾರ್‌ (ಜೀ ನ್ಯೂಸ್‌), ಸ್ಮೃತಿ ಕಾಕ್‌ ರಾಮಚಂದ್ರನ್‌ (ಹಿಂದೂಸ್ತಾನ್ ಟೈಮ್ಸ್‌), ಅಮಿತ್‌ ಕುಮಾರ್‌ (ಟೈಮ್ಸ್‌ ನೌ), ವಸುಧಾ ವೇಣುಗೋಪಾಲ್‌ (ಎಕನಾಮಿಕ್ಸ್‌ ಟೈಮ್ಸ್‌) ಮತ್ತು ಪ್ರೆಸ್ ಇನ್‌ಫಾರ್ಮೆಷನ್‌ ಬ್ಯೂರೋ (ಪಿಐಬಿ) ಹೆಚ್ಚುವರಿ ಮಹಾನಿರ್ದೇಶಕ ಕಾಂಚನ್‌ ಪ್ರಸಾದ್‌ ಅವರನ್ನು ಸದಸ್ಯರನ್ನಾಗಿ ಮತ್ತು ನಿರ್ದೇಶಕ (ಐಪಿ) ಪಂಕಜ್‌ ಸಲೋಡಿಯಾ ಅವರನ್ನು ಸಮಿತಿಯ ಸಂಚಾಲಕರನ್ನಾಗಿ ನೇಮಿಸಲಾಗಿದೆ.

ADVERTISEMENT

ಪತ್ರಕರ್ತರ ಸಾವಿನ ಸಂದರ್ಭದಲ್ಲಿ ಮತ್ತು ಜೆಡಬ್ಲ್ಯೂಎಸ್ ಯೋಜನೆಯಡಿ ಇತರ ಪ್ರಕರಣಗಳಲ್ಲಿ ಪತ್ರಕರ್ತರ ಕುಟುಂಬಕ್ಕೆ ನೀಡಬೇಕಾದ ಎಕ್ಸ್-ಗ್ರೇಷಿಯಾ ಪಾವತಿಯ ಪ್ರಮಾಣವನ್ನು ಈ ಸಮಿತಿ ಪರಿಷ್ಕರಿಸಲಿದೆ ಎಂದು ಸಚಿವಾಲಯ ಗುರುವಾರ ತಿಳಿಸಿದೆ.

ಈ ಸಮಿತಿಯು ಎರಡು ತಿಂಗಳಲ್ಲಿ ತನ್ನ ಶಿಫಾರಸುಗಳನ್ನು ನೀಡಲಿದೆ. ಅಲ್ಲದೇ ಸಮಿತಿಯ ಸಭೆಗಳನ್ನು ಕರೆಯಲು ಸಚಿವಾಲಯದ ನೆರವನ್ನು ಪ್ರೆಸ್ ಇನ್‌ಫಾರ್ಮೆಷನ್‌ ಬ್ಯೂರೊ (ಪಿಐಬಿ) ಒದಗಿಸಲಿದೆ ಎಂದು ಸಚಿವಾಲಯ ತಿಳಿಸಿದೆ.

ಎಕ್ಸ್-ಗ್ರೇಷಿಯಾ ಪಾವತಿಯ ಪ್ರಮಾಣದ ಪರಿಷ್ಕರಣೆಯ ಜತೆಗೆ ಎಕ್ಸ್-ಗ್ರೇಷಿಯಾ ಪಡೆಯಲು ಇರುವ ಷರತ್ತುಗಳನ್ನು ಈ ಸಮಿತಿ ಪರಿಶೀಲಿಸಲಿದೆ. ಜೆಡಬ್ಲ್ಯೂಎಸ್ ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ನಿಗದಿಪಡಿಸಿರುವ ಮಾನ್ಯತೆ ಪಡೆದ ಮತ್ತು ಮಾನ್ಯತೆ ಪಡೆಯದ ಪತ್ರಕರ್ತರ ನಡುವಿನ ವ್ಯತ್ಯಾಸವನ್ನು ಸರಿಪಡಿಸುವ ಬಗ್ಗೆ ಈ ಸಮಿತಿ ಪರಿಶೀಲಿಸಲಿದೆ. ಸಮಿತಿಯು ಸೂಕ್ತವೆಂದು ಪರಿಗಣಿಸುವ ಇತರ ಯಾವುದೇ ಅಂಶಗಳನ್ನು ಷರತ್ತುಗಳಲ್ಲಿ ಸೇರಿಸಲಾಗುವುದು ಎಂದು ಸಚಿವಾಲಯ ಹೇಳಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.