
ನವದೆಹಲಿ: ಸಂಸತ್ತಿಗೆ ನಾಯಿ ತಂದಿದ್ದನ್ನು ವಿರೋಧಿಸಿ ಆಡಳಿತ ಪಕ್ಷದ ಸದಸ್ಯರು ತಮ್ಮ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ವರದಿಗಳಿಗೆ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಬುಧವಾರ ‘ಬೌ ಬೌ’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಅವರ ಪ್ರತಿಕ್ರಿಯೆಯು ಮೀಮ್‌ಗಳಿಗೆ ಆಹಾರವಾಗಿದ್ದು, ಬಹಾ ಮೆನ್ ಬ್ಯಾಂಡ್‌ನ ಪ್ರಸಿದ್ಧ ‘ಹೂ ಲೆಟ್ ದಿ ಡಾಗ್ಸ್ ಔಟ್’ ಹಾಡಿಗೆ ಅವರ ಹೇಳಿಕೆಯನ್ನು ರಿಮಿಕ್ಸ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದ್ದು, ಅದು ವ್ಯಾಪಕವಾಗಿ ಹರಿದಾಡಿದೆ.
ಹಕ್ಕುಚ್ಯುತಿ ಮಂಡನೆ ವರದಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬೌ ಬೌ...! ನಾನು ಇನ್ನೇನು ಹೇಳಲಿ? ಏನು ಸಮಸ್ಯೆಯಾಗಿದೆ ಎಂದು ಮುಂದೆ ನೋಡೋಣ. ಆಗ ತಕ್ಕ ಉತ್ತರ ನೀಡುತ್ತೇನೆ’ ಎಂದು ಹೇಳಿದ್ದಾರೆ.
ಸೋಮವಾರ ಅವರು ತಮ್ಮ ಕಾರಿನಲ್ಲಿ ಸಂಸತ್ತಿನ ಆವರಣಕ್ಕೆ ನಾಯಿಯನ್ನು ಕರೆದುಕೊಂಡು ಬಂದಿದ್ದರು. ಅದು ಬೀದಿನಾಯಿಯಾಗಿದ್ದು, ಅದನ್ನು ತಾನು ರಕ್ಷಿಸಿ ಪಶುವೈದ್ಯರ ಬಳಿಗೆ ಕರೆದೊಯ್ಯುತ್ತಿರುವುದಾಗಿ ಹೇಳಿದ್ದರು.
‘ಒಳಗೆ ಕುಳಿತವರು ಕಚ್ಚುತ್ತಾರೆ, ನಾಯಿಗಳು ಕಚ್ಚುವುದಿಲ್ಲ’ ಎಂದು ಚೌಧರಿ ತಮ್ಮ ನಡೆಯನ್ನು ಸಮರ್ಥಿಸುತ್ತಾ ಹೇಳಿದ್ದರು. ಅವರ ಈ ಹೇಳಿಕೆಗೆ ಆಡಳಿತ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.