ADVERTISEMENT

ವಿಶೇಷ ಪ್ರಕರಣಗಳಲ್ಲಿಗರ್ಭಪಾತ ಅವಧಿ ಏರಿಕೆ:ಮಸೂದೆಗೆ ರಾಜ್ಯಸಭೆ ಅಸ್ತು

ಪಿಟಿಐ
Published 16 ಮಾರ್ಚ್ 2021, 16:34 IST
Last Updated 16 ಮಾರ್ಚ್ 2021, 16:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅತ್ಯಾಚಾರ ಸಂತ್ರಸ್ತೆಯರು, ಬಾಲಕಿಯರು, ಅಂಗವಿಕಲೆಯರು ಒಳಗೊಂಡಂತೆ ವಿಶೇಷ ಪ್ರಕರಣಗಳಲ್ಲಿ ಗರ್ಭಪಾತ ಮಾಡಿಸಬಹುದಾದ ಅವಧಿಯನ್ನು ಈಗಿನ 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಮಸೂದೆಗೆ ರಾಜ್ಯಸಭೆ ಮಂಗಳವಾರ ಅಂಗೀಕಾರ ನೀಡಿತು.

‘ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ 2020’ ಅನ್ನು ರಾಜ್ಯಸಭೆಯು ಧ್ವನಿಮತದಿಂದ ಅಂಗೀಕರಿಸಿತು.ಲೋಕಸಭೆಯು ಈ ಮಸೂದೆಗೆ ವರ್ಷದ ಹಿಂದೆಯೇ ಅಂಗೀಕಾರ ನೀಡಿತ್ತು.

ಇದಕ್ಕೆ ಮೊದಲು ರಾಜ್ಯಸಭೆಯ ಆಯ್ಕೆ ಸಮಿತಿಗೆ ಮಸೂದೆಯನ್ನು ಕಳುಹಿಸಬೇಕು ಎಂದು ಕಾಂಗ್ರೆಸ್‌ ನಾಯಕ ಪ್ರತಾಪ್‌ ಸಿಂಗ್ ಬಜ್ವಾ ನಿಲುವಳಿ ಸೂಚನೆ ಮಂಡಿಸಿದರು. ಆದರೆ, ಇದಕ್ಕೆ ಧ್ವನಿಮತದಿಂದ ಸೋಲುಂಟಾಯಿತು. ಬಳಿಕ, ಮಸೂದೆಗೆ ಅಂಗೀಕಾರ ದೊರೆತಿದೆ ಎಂದು ಉಪಾಧ್ಯಕ್ಷ ಹರಿವಂಶನಾರಾಯಣ ಸಿಂಗ್ ಪ್ರಕಟಿಸಿದರು.

ADVERTISEMENT

‘ವಿಶ್ವದ ಇತರೆಡೆ ಅನುಸರಿಸುತ್ತಿರುವ ಕ್ರಮ ಮತ್ತು ದೇಶದಾದ್ಯಂತ ವಿಸ್ತೃತ ಚರ್ಚೆಯ ನಂತರವೇ ಈ ತಿದ್ದುಪಡಿ ತರಲಾಗಿದೆ. ಮೋದಿ ನಾಯಕತ್ವದಲ್ಲಿ ಮಹಿಳೆಗೆ ಧಕ್ಕೆಯಾಗುವಂತಹ ಯಾವುದೇ ಕಾನೂನನ್ನು ಸರ್ಕಾರ ರೂಪಿಸುವುದಿಲ್ಲ’ ಎಂದು ಆರೋಗ್ಯ ಸಚಿವ ಹರ್ಷವರ್ಧನ್‌ ಪ್ರತಿಪಾದಿಸಿದರು.

ಉದ್ದೇಶಿತ ಮಸೂದೆಯು ಮಹಿಳೆಯ ಘನತೆಯನ್ನು ರಕ್ಷಿಸಲಿದೆ. ಕೆಲ ಸದಸ್ಯರ ಆಕ್ಷೇಪ ಮತ್ತು ಸಲಹೆಗಳು ಸಹಜವಾಗಿದ್ದು, ಅವರ ಪಕ್ಷದ ಚಿಂತನೆಗೆ ಪೂರಕವಾಗಿವೆ ಎಂದರು. ಕಾಂಗ್ರೆಸ್ ಅಲ್ಲದೆ, ಶಿವಸೇನೆ, ಎಐಟಿಸಿ, ಸಿಪಿಐ, ಸಿಪಿಎಂ, ಸಮಾಜವಾದಿ ಪಕ್ಷ ಕೂಡಾ ಮಸೂದೆಯನ್ನು ಆಯ್ಕೆ ಸಮಿತಿ ಪರಿಶೀಲನೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.