ADVERTISEMENT

ಸಂಸತ್‌ ಭದ್ರತಾ ಲೋಪ: ಸುಳ್ಳುಪತ್ತೆ ಪರೀಕ್ಷೆಗೆ ಒಪ್ಪಿಗೆ ನೀಡಿದ ಐವರು ಆರೋಪಿಗಳು

ಪಿಟಿಐ
Published 5 ಜನವರಿ 2024, 10:13 IST
Last Updated 5 ಜನವರಿ 2024, 10:13 IST
   

ನವದೆಹಲಿ: ಸಂಸತ್‌ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರು ಆರೋಪಿಗಳ ಪೈಕಿ ಐವರು ಸುಳ್ಳುಪತ್ತೆ ಪರೀಕ್ಷೆ (polygraph)ಯನ್ನು ನಡೆಸಲು ಶುಕ್ರವಾರ ಇಲ್ಲಿನ ನ್ಯಾಯಾಲಯದಲ್ಲಿ ಒಪ್ಪಿಗೆ ನೀಡಿದ್ದಾರೆ.

ಎಲ್ಲ ಆರೋಪಿಗಳನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲು ಅನುಮತಿ ಕೋರಿ ದೆಹಲಿ ಪೊಲೀಸರು ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ನೀಲಂ ಆಜಾದ್ ಹೊರತುಪಡಿಸಿ ಉಳಿದ ಆರೋಪಿಗಳು ಪರೀಕ್ಷೆಗೆ ಒಪ್ಪಿಗೆ ನೀಡಿದ್ದಾರೆ.

ಪೊಲೀಸ್‌ ಕಸ್ಟಡಿ ವಿಸ್ತರಣೆ:

ADVERTISEMENT

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ಆರೋಪಿಗಳಾದ ಡಿ.ಮನೋರಂಜನ್, ಸಾಗರ್ ಶರ್ಮಾ, ಅಮೋಲ್ ಧನರಾಜ್ ಶಿಂಧೆ, ನೀಲಂ ಆಜಾದ್, ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಅವರ ಪೊಲೀಸ್ ಕಸ್ಟಡಿಯನ್ನು ಇಂದಿನಿಂದ 8 ದಿನಗಳವರೆಗೆ ವಿಸ್ತರಿಸಿದ್ದಾರೆ.

ಈ ಹಿಂದೆ ನೀಡಲಾಗಿದ್ದ ಕಸ್ಟಡಿ ಅವಧಿ ಮುಗಿದ ನಂತರ ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ದೆಹಲಿ ಪೊಲೀಸರು ಸಲ್ಲಿಸಿದ ಅರ್ಜಿಯ ಮೇರೆಗೆ ನ್ಯಾಯಾಧೀಶರು ಆರೋಪಿಗಳ ಕಸ್ಟಡಿಯನ್ನು ವಿಸ್ತರಿಸಿದರು.

ಪ್ರಕರಣದ ಹಿನ್ನೆಲೆ:

ಸಂಸತ್‌ ಮೇಲಿನ ದಾಳಿಯ 22ನೇ ವರ್ಷದ ಕಹಿ ನೆನಪಿನ ದಿನವೇ( 2023ರ ಡಿ.13) ಭಾರಿ ಭದ್ರತಾ ಲೋಪದ ಘಟನೆಗೆ ಲೋಕಸಭೆ ಸಾಕ್ಷಿಯಾಗಿತ್ತು. ಕಲಾಪ ನಡೆಯುತ್ತಿರುವಾಗಲೇ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ ‘ಸ್ಮೋಕ್‌ ಕ್ಯಾನ್‌’ ಹಾರಿಸಿ ದಾಂದಲೆ ಎಬ್ಬಿಸಿದರು. ಇದರಿಂದಾಗಿ, ಸದನದಲ್ಲಿ ಆತಂಕ ಸೃಷ್ಟಿಯಾಗಿತ್ತು.

ಏನಿದು ಸುಳ್ಳು ಪತ್ತೆ ಪರೀಕ್ಷೆ?:

ಯಾವುದಾದರೂ ಒಂದು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಳ್ಳು ಹೇಳುತ್ತಿದ್ದರೆ ಅದನ್ನು ಖಚಿತ ಪಡಿಸಿಕೊಳ್ಳಲು ಪೊಲೀಸರು ಸುಳ್ಳು ಪತ್ತೆ ಪರೀಕ್ಷೆ ನಡೆಸುತ್ತಾರೆ.

ಪರೀಕ್ಷೆ ಹೇಗೆ?

ಮೊದಲು ಆರೋಪಿಗೆ ಚುಚ್ಚು ಮದ್ದು ಕೊಡಲಾಗುತ್ತದೆ. ನಂತರ ಘಟನೆಗೆ ಸಂಬಂಧಿಸಿದಂತೆ ಪ್ರಶ್ನೆ ಮಾಡಲಾಗುತ್ತದೆ. ಪ್ರಶ್ನೆಗೆ ಉತ್ತರಿಸುವಾಗ ಆರೋಪಿಯ ಉಸಿರಾಟ ಸೇರಿದಂತೆ ಮನಸಿನಲ್ಲಿ ಉಂಟಾಗುವ ಒತ್ತಡವನ್ನು ಆಧರಿಸಿ ಸುಳ್ಳು ಪತ್ತೆ ಯಂತ್ರ ಗ್ರಾಫ್‌ ನೀಡುತ್ತದೆ. ಅದನ್ನು ನೋಡಿ ಆರೋಪಿ ಸುಳ್ಳು ಹೇಳುತ್ತಿದ್ದಾನೆ ಎಂದಷ್ಟೆ ಖಚಿತ ಪಡಿಸಿಕೊಳ್ಳಬಹುದು.

ಸಾಮಾನ್ಯವಾಗಿ ಗಂಭೀರ ಸ್ವರೂಪದ ಪ್ರಕರಣದಲ್ಲಿ ಅರೋಪಿಗಳನ್ನು ಈ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.