ADVERTISEMENT

ಸಂಸತ್ ಚಳಿಗಾಲದ ಅಧಿವೇಶನ ಡಿ. 1ರಿಂದ 19ರವರೆಗೆ: ಕೇವಲ 15 ದಿನಕ್ಕೆ ವಿಪಕ್ಷ ಕಿಡಿ

ಪಿಟಿಐ
Published 8 ನವೆಂಬರ್ 2025, 11:35 IST
Last Updated 8 ನವೆಂಬರ್ 2025, 11:35 IST
<div class="paragraphs"><p>ಸಂಸತ್ ಭವನ</p></div>

ಸಂಸತ್ ಭವನ

   

ನವದೆಹಲಿ: ‘ಸಂಸತ್ತಿನ ಚಳಿಗಾಲದ ಅಧಿವೇಶವು ಡಿ. 1ರಿಂದ ಆರಂಭಗೊಂಡು 19ರವರೆಗೂ ನಡೆಯಲಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ಹೇಳಿದ್ದಾರೆ.

15 ಕೆಲಸದ ದಿನಗಳ ಅಧಿವೇಶನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು, ‘ವಿಳಂಬ ಮತ್ತು ಆರಂಭವಾಗುತ್ತಲೇ ಮೊಟಕುಗೊಳಿಸಿದ ಅಧಿವೇಶನ’ ಎಂದು ಆಕ್ರೋಶ ವ್ಯಕ್ತಪಡಿಸಿವೆ.

ADVERTISEMENT

ಮೂರು ವಾರಗಳ ಅಧಿವೇಶನದಲ್ಲಿ ಒಟ್ಟು 15 ದಿನ ಕಲಾಪ ನಡೆಯಲಿದೆ. ಚುನಾವಣಾ ಆಯೋಗವು 12 ರಾಜ್ಯಗಳಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ವಿಷಯ ಕುರಿತು ಬಿರುಗಾಳಿ ಎಬ್ಬಿಸಲು ವಿಪಕ್ಷಗಳು ಸಜ್ಜಾಗಿದ್ದವು. ಮುಂಗಾರು ಅಧಿವೇಶನ ಸಂದರ್ಭದಲ್ಲೂ ಬಿಹಾರದಲ್ಲಿ ಕೈಗೊಂಡಿದ್ದ ಎಸ್‌ಐಆರ್‌ ಕುರಿತು ವ್ಯಾಪಕ ವಿರೋಧ, ಪ್ರತಿಭಟನೆಗಳನ್ನು ವಿಪಕ್ಷಗಳ ಸಂಸದರು ನಡೆಸಿದ್ದರು. ಇದರಿಂದ ಕಲಾಪಕ್ಕೂ ಅಡ್ಡಿಯಾಗಿತ್ತು.

ಡಿಸೆಂಬರ್ 1ರಿಂದ 19ರವರೆಗೆ ಚಳಿಗಾಲದ ಅಧಿವೇಶನ ನಡೆಸುವ ಕೇಂದ್ರದ ಪ್ರಸ್ತಾವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮತಿ ನೀಡಿದ್ದಾರೆ ಎಂದು ಸಚಿವ ರಿಜಿಜು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಪ್ರಜಾಪ್ರಭುತ್ವವನ್ನು ಇನ್ನಷ್ಟು ಸುಭದ್ರಗೊಳಿಸುವ ಮತ್ತು ಜನರ ಆಶೋತ್ತರಗಳಿಗೆ ಪೂರಕವಾದ ರಚನಾತ್ಮಕ ಮತ್ತು ಅರ್ಥಪೂರ್ಣ ಅಧಿವೇಶನವನ್ನು ಎದುರು ನೋಡುತ್ತಿದ್ದೇವೆ’ ಎಂದಿದ್ದಾರೆ.

ಬಿಹಾರ ಫಲಿತಾಂಶ, ಟ್ರಂಪ್ ಹೇಳಿಕೆ ಚರ್ಚೆ ಸಾಧ್ಯತೆ

ನ. 14ರಂದು ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಆಡಳಿತಾರೂಢ ಎನ್‌ಡಿಎ ಮತ್ತು ಆರ್‌ಜೆಡಿ–ಕಾಂಗ್ರೆಸ್ ನೇತೃತ್ವದ ಮಹಾ ಘಟಬಂಧನ್‌ ನಡುವೆ ನೇರ ಹಣಾಹಣಿಯಲ್ಲಿ ಗೆಲುವು ಯಾರದ್ದಾಗಲಿದೆ ಎಂಬ ಚರ್ಚೆಗೆ ಅಂದು ತೆರೆ ಬೀಳಲಿದೆ. ಇದೂ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಯ ವಿಷಯವಾಗುವ ಸಾಧ್ಯತೆ ಇದೆ.

ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವುದಾಗಿ ಬೆದರಿಕೆಯೊಡ್ಡಿ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಕೊನೆಗೊಳಿಸಿರುವುದಾಗಿ ಪದೇ ಪದೇ ಹೇಳಿಕೆ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತಿಗೆ ಸರ್ಕಾರದ ಪ್ರತಿಕ್ರಿಯೆ ಕೇಳಲೂ ವಿರೋಧ ಪಕ್ಷಗಳು ಸಜ್ಜಾಗಿವೆ ಎಂದೆನ್ನಲಾಗಿದೆ.

ಚಳಿಗಾಲದ ಅಧಿವೇಶನದ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ಅವರು ಸರ್ಕಾರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ. 

‘ಅಧಿವೇಶನವು 15 ಕೆಲಸ ದಿನಗಳಲ್ಲಿ ಕೊನೆಗೊಳ್ಳಲಿದೆ. ಇದರಿಂದ ಯಾವ ಸಂದೇಶ ರವಾನಿಸಲಾಗುತ್ತಿದೆ? ವ್ಯವಹರಿಸಲು ಆಸಕ್ತಿಯ ಕೊರತೆ, ಯಾವುದೇ ಮಸೂದೆ ಮಂಡನೆ ಇಲ್ಲ ಮತ್ತು ಯಾವುದೇ ಚರ್ಚೆಗೆ ಅವಕಾಶವಿಲ್ಲ ಎಂಬುದಷ್ಟೇ ಸರ್ಕಾರದ ಉದ್ದೇಶವಾಗಿದೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

‘ಸರ್ಕಾರಕ್ಕೆ ‘ಪಾರ್ಲಿಯಮೆಂಟ್‌ ಒಫೋಬಿಯಾ’ ಸಮಸ್ಯೆ ಕಾಡುತ್ತಿದೆ’ ಎಂದು ತೃಣಮೂಲ ಕಾಂಗ್ರೆಸ್‌ನ ಮುಖಂಡ ಡೆರೆಕ್ ಒಬ್ರಯಾನ್‌ ಟೀಕಿಸಿದ್ದಾರೆ.

2024ರ ಚಳಿಗಾಲಯದ ಅಧಿವೇಶನವು ನ. 25ರಿಂದ ಡಿ. 20ರವರೆಗೆ ನಡೆದಿತ್ತು. ಈ ಬಾರಿ ಅಧಿವೇಶನ ಸಂದರ್ಭದಲ್ಲೇ ಕೇಂದ್ರ ಚುನಾವಣಾ ಆಯೋಗದ ಮತದಾರರ ವಿಶೇಷ ಪರಿಷ್ಕರಣೆ ನಡೆಯುತ್ತಿರುತ್ತದೆ. ತಮಿಳುನಾಡು, ಪುದುಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಳ ಒಳಗೊಂಡಂತೆ 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಕ್ರಿಯೆ ಆರಂಭಿಸಿದೆ. ನ. 4ರಿಂದ ಆರಂಭವಾಗಿರುವ ಇದು ಡಿ. 4ರವರೆಗೂ ಮುಂದುವರಿಯಲಿದೆ. ಡಿ. 9ರಂದು ಕರಡು ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಮತದಾರರ ಅಂತಿಮ ಪಟ್ಟಿಯು ಫೆ. 7ರಂದು ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.