ADVERTISEMENT

ನ್ಯಾಯಮೂರ್ತಿ ಯಶವಂತ ವರ್ಮಾ ಪ್ರಕರಣ: ಎಫ್‌ಐಆರ್‌ ಏಕಿಲ್ಲ?; ಸಂಸದೀಯ ಸಮಿತಿ

ಕಾನೂನು ಮತ್ತು ನ್ಯಾಯ ಕುರಿತ ಸಂಸದೀಯ ಸಮಿತಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 15:07 IST
Last Updated 24 ಜೂನ್ 2025, 15:07 IST
   

ನವದೆಹಲಿ: ‘ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ನಗದು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್‌ ದಾಖಲಿಸಿಲ್ಲ ಏಕೆ’ ಎಂದು ಸಂಸದೀಯ ಸಮಿತಿಯೊಂದು ಮಂಗಳವಾರ ಪ್ರಶ್ನಿಸಿದೆ.

ಬಿಜೆಪಿಯ ರಾಜ್ಯಸಭಾ ಸಂಸದ ಬ್ರಿಜ ಲಾಲ್‌ ನೇತೃತ್ವದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯ ಕುರಿತ ಸಂಸದೀಯ ಸಮಿತಿ ಮುಂದೆ ಹಾಜರಾಗಿದ್ದ ನ್ಯಾಯ ಇಲಾಖೆಯ ಕಾರ್ಯದರ್ಶಿ, ಪ್ರಕರಣ ಕುರಿತು ವಿವರಣೆ ನೀಡಿದ್ದಾರೆ.

‘ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಹಾಗೂ ಪ್ರಸ್ತಾಪಿಸಿದ ವಿಷಯಗಳಿಗೆ ಸಂಬಂಧಿಸಿ, ಸಮಿತಿಯ ಮುಂದಿನ ಸಭೆಯಲ್ಲಿ ಸಮಗ್ರ ವರದಿ ಮಂಡಿಸುವಂತೆ ಸೂಚಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಈ ಪ್ರಕರಣವು ನ್ಯಾಯಾಂಗ ಕುರಿತಂತೆ ಆತಂಕ ಮೂಡುವಂತೆ ಮಾಡಿದೆ. ನ್ಯಾಯಾಧೀಶರು ಹಾಗೂ ನ್ಯಾಯಮೂರ್ತಿಗಳಿಗೆ ಸಂಬಂಧಿಸಿ ನೀತಿ ಸಂಹಿತೆ ರೂಪಿಸಬೇಕು. ಇದಕ್ಕಾಗಿ ಸಮಗ್ರ ಮಸೂದೆಯೊಂದರ ಅಗತ್ಯವಿದೆ ಎಂಬುದಾಗಿ ಸಮಿತಿ ಸದಸ್ಯರು ಪ್ರತಿಪಾದಿಸಿದರು’ ಎಂದು ಹೇಳಿವೆ.

ನ್ಯಾಯಮೂರ್ತಿ ವರ್ಮಾ ನಿವಾಸದಲ್ಲಿ ನಗದು ವಶಪಡಿಸಿಕೊಂಡಿರುವುದು ಸತ್ಯ ಎಂಬುದಾಗಿ ಸುಪ್ರೀಂ ಕೋರ್ಟ್‌ ನೇಮಿಸಿದ್ದ ನ್ಯಾಯಮೂರ್ತಿಗಳ ಸಮಿತಿ ಹೇಳಿದೆ. ಹಾಗಾಗಿ, ನ್ಯಾಯಮೂರ್ತಿ ವರ್ಮಾ ಅವರ ಪದಚ್ಯುತಿಗೆ ಸಂಬಂಧಿಸಿ ಸರ್ಕಾರ ಗೊತ್ತುವಳಿ ಮಂಡಿಸಬೇಕಿತ್ತು ಎಂದು ಸಮಿತಿಯ ಕೆಲ ಸದಸ್ಯರು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ವಿವಿಧ ಪಕ್ಷಗಳ ಸಂಸದರು ಸಮಿತಿ ಸದಸ್ಯರಾಗಿದ್ದಾರೆ. ಸಮಿತಿ ಸದಸ್ಯರ ಪೈಕಿ ಒಬ್ಬರಾದ ನಿವೃತ್ತ ಸಿಜೆಐ ರಂಜನ್‌ ಗೊಗೋಯಿ ಸಭೆಗೆ ಗೈರಾಗಿದ್ದರು.

ಸಮಿತಿ ಮುಂದಿಟ್ಟ ಪ್ರಶ್ನೆಗಳು

* ನಿವೃತ್ತಿ ನಂತರ ಐದು ವರ್ಷ ಪೂರ್ಣಗೊಳ್ಳುವವರೆಗೆ ನ್ಯಾಯಮೂರ್ತಿಗಳು ಸರ್ಕಾರ ನೀಡುವ ಯಾವುದೇ ಹುದ್ದೆಯನ್ನು ಒಪ್ಪಿಕೊಳ್ಳಬಾರದು

* ನ್ಯಾಯಮೂರ್ತಿ ವರ್ಮಾ ಅವರ ನಿವಾಸದಲ್ಲಿ ಲೆಕ್ಕಪತ್ರವಿಲ್ಲದ ನಗದು ವಶಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲವೇಕೆ?

* ನ್ಯಾಯಮೂರ್ತಿ ವರ್ಮಾ ಅವರನ್ನು ಪದಚ್ಯುತಗೊಳಿಸುವ ಕುರಿತ ಗೊತ್ತುವಳಿ ಮಂಡನೆ ಮಾಡಿಲ್ಲ ಏಕೆ?

* ಸಣ್ಣ ಪ್ರಮಾಣದ ಭ್ರಷ್ಟಾಚಾರದಲ್ಲಿ ಸರ್ಕಾರಿ ನೌಕರ ತನ್ನ ಉದ್ಯೋಗ ಕಳೆದುಕೊಳ್ಳುತ್ತಾರೆ. ಆದರೆ ನ್ಯಾಯಾಂಗದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ನಿವಾಸದಲ್ಲಿ ಲೆಕ್ಕಪತ್ರ ಇಲ್ಲದ ನಗದು ವಶಪಡಿಸಿಕೊಂಡಿದ್ದರೂ ಕ್ರಮ ಜರುಗಿಸಿಲ್ಲ ಏಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.