ADVERTISEMENT

ಅಧಿವೇಶನ ಮೊಟಕು ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 17:52 IST
Last Updated 19 ಸೆಪ್ಟೆಂಬರ್ 2020, 17:52 IST

ನವದೆಹಲಿ: ಕೋವಿಡ್‌–19ಗೆ ಒಳಗಾಗುವ ಸಂಸದರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸೆ.14ರಂದು ಆರಂಭವಾಗಿರುವ ಮುಂಗಾರು ಅಧಿವೇಶನವನ್ನು ಮೊಟಕುಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸ್ಪೀಕರ್‌ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಂಸತ್ತಿನ ಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ಸದಸ್ಯರು, ಕಲಾಪವನ್ನು ಮೊಟಕುಗೊಳಿಸುವ ಪರವಾಗಿ ಮಾತನಾಡಿದ್ದಾರೆ. ಅಧಿವೇಶನವನ್ನು ಮೊಟಕುಗೊಳಿಸುವ ಅಂತಿಮ ತೀರ್ಮಾನವನ್ನು ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್‌ ಸಮಿತಿಯು ಕೈಗೊಳ್ಳಲಿದೆ. ಪೂರ್ವನಿಗದಿತ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್‌ 1ರವರೆಗೆ ಅಧಿವೇಶನ ನಡೆಯಬೇಕಾಗಿತ್ತು.

ಕೇಂದ್ರದ ಸಚಿವ ನಿತಿನ್‌ ಗಡ್ಕರಿ, ಪ್ರಹ್ಲಾದ್‌ ಪಟೇಲ್‌ ಮತ್ತು ಹಲವು ಸಂಸದರು ಕೋವಿಡ್‌–19ಗೆ ಒಳಗಾಗಿರುವುದರಿಂದ ಅಧಿವೇಶನವನ್ನು ಮೊಟಕುಗೊಳಿಸುವುದು ಸೂಕ್ತ ಎಂಬ ಸಲಹೆಯನ್ನು ವಿರೋಧ ಪಕ್ಷಗಳ ಸದಸ್ಯರು ಸರ್ಕಾರಕ್ಕೆ ನೀಡಿದ್ದಾರೆ.

ADVERTISEMENT

ಪ್ರಸಕ್ತ ಅಧಿವೇಶನದಲ್ಲಿ ಈವರೆಗೆ ಕೃಷಿಗೆ ಸಂಬಂಧಿಸಿದ ಸುಗ್ರೀವಾಜ್ಞೆಗೆ ಕಾನೂನಿನ ಸ್ವರೂಪ ನೀಡುವ ಮೂರು ಮಸೂದೆಗಳು ಹಾಗೂ ಸಂಸದರ ವೇತನ ಮತ್ತು ಭತ್ಯೆ ಕಡಿಮೆ ಮಾಡುವ ಮಸೂದೆಯನ್ನು ಅಂಗೀಕರಿಸಲಾಗಿದೆ.

ಪಾಕ್‌ ಜತೆ ಮಾತುಕತೆ ಯಾಕಿಲ್ಲ?

‘ಗಡಿ ವಿವಾದಗಳನ್ನು ಇತ್ಯರ್ಥಪಡಿಸಲು ಭಾರತವು ಚೀನಾದ ಜತೆಗೆ ಮಾತುಕತೆ ನಡೆಸಬಲ್ಲದಾದರೆ ಜಮ್ಮು ಕಾಶ್ಮೀರದ ಸಮಸ್ಯೆ ಇತ್ಯರ್ಥಕ್ಕೆ ಪಾಕಿಸ್ತಾನದ ಜತೆಗೂ ಯಾಕೆ ಮಾತುಕತೆ ನಡೆಸಬಾರದು’ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಪ್ರಶ್ನಿಸಿದರು.

ಗೃಹಬಂಧನದಿಂದ ಬಿಡುಗಡೆಯಾದ ಬಳಿಕ ಮೊದಲಬಾರಿ ಸಂಸತ್ತಿನಲ್ಲಿ ಶನಿವಾರ ಮಾತನಾಡಿದ ಅವರು, ‘ಗಡಿಗಳಲ್ಲಿ ಚಕಮಕಿಯ ಪ್ರಮಾಣ ಹೆಚ್ಚುತ್ತಿದೆ. ಜನರು ಸಾಯುತ್ತಿದ್ದಾರೆ. ಇದನ್ನು ತಪ್ಪಿಸುವ ದಾರಿಯನ್ನು ಕಂಡುಕೊಳ್ಳಬೇಕು. ಗಡಿಯಿಂದ ಸೇನೆಯನ್ನು ಹಿಂತೆಗೆದುಕೊಳ್ಳಲು ನೀವು ಚೀನಾದ ಜತೆಗೆ ಮಾತುಕತೆ ನಡೆಸುತ್ತೀರಿ. ನಮ್ಮ ಇತರ ನೆರೆರಾಷ್ಟ್ರಗಳೊಂದಿಗೂ ಇದೇ ನೀತಿಯನ್ನು ಅನುಸರಿಸಬೇಕು’ ಎಂದರು. ಫಾರೂಕ್‌ ಅವರ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.