ADVERTISEMENT

ಗೋ ಏರ್ ವಿಮಾನದಲ್ಲಿ ಆತಂಕ ಸೃಷ್ಟಿ: ಪ್ರಯಾಣಿಕನ ಬಂಧನ, ಬಿಡುಗಡೆ

ಶೌಚಾಲಯದ ಬಾಗಿಲು ಎಂದು ತುರ್ತು ನಿರ್ಗಮನ ದ್ವಾರದ ಬಾಗಿಲು ತೆಗೆಯಲು ಯತ್ನ

ಪಿಟಿಐ
Published 24 ಸೆಪ್ಟೆಂಬರ್ 2018, 18:49 IST
Last Updated 24 ಸೆಪ್ಟೆಂಬರ್ 2018, 18:49 IST
ಗೋ ಏರ್ ವಿಮಾನ
ಗೋ ಏರ್ ವಿಮಾನ   

ಪಟ್ನಾ: ನವದೆಹಲಿಯಿಂದ ಬಿಹಾರದ ಪಟ್ನಾಕ್ಕೆ ತೆರಳುತ್ತಿದ್ದ ಗೋ ಏರ್‌ ವಿಮಾನದಲ್ಲಿ ಪ್ರಯಾಣಿಕರೊಬ್ಬರು ತುರ್ತು ನಿರ್ಗಮನದ ದ್ವಾರವನ್ನೇ ಶೌಚಾಲಯದ ಬಾಗಿಲು ಎಂದುಕೊಂಡು ತೆಗೆಯಲು ಯತ್ನಿಸಿದ್ದರಿಂದ ಆತಂಕ ಸೃಷ್ಟಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಬಾಗಿಲು ತೆಗೆಯಲು ಯತ್ನಿಸಿದ ಪ್ರಯಾಣಿಕ ರಾಜಸ್ತಾನದ ಅಜ್ಮೀರ್‌ನಲ್ಲಿ ಪ್ರಮುಖ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ಇವರನ್ನು ಹಿಡಿದುಕೊಂಡ ವಿಮಾನದ ಸಿಬ್ಬಂದಿ ಪಟ್ನಾದ ಜಯಪ್ರಕಾಶ್‌ ನಾರಾಯಣ್‌ ನಿಲ್ದಾಣದಲ್ಲಿ ವಿಮಾನ ಇಳಿಯುತ್ತಿದ್ದಂತೆ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ ವಶಕ್ಕೆ ನೀಡಿದ್ದರು. ವೈಯಕ್ತಿಕ ಬಾಂಡ್‌ ಆಧಾರದ ಮೇಲೆ ಅವರನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ.

‘ಪ್ರಯಾಣಿಕನನ್ನು ವಿಚಾರಣೆಗೆ ವಿಮಾನ ನಿಲ್ದಾಣದ ಪೊಲೀಸರಿಗೆ ನೀಡಲಾಗಿತ್ತು’ ಎಂದು ಗೋ ಏರ್‌ ವಿಮಾನಯಾನ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ‍ಪ್ರಜಾವಾಣಿಗೆ ತಿಳಿಸಿದ್ದಾರೆ.

ADVERTISEMENT

‘ತಾನು ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರಿಂದ ತುರ್ತು ನಿರ್ಗಮನದ ದ್ವಾರವನ್ನೇ ಶೌಚಾಲಯದ ಬಾಗಿಲು ಎಂದು ತಿಳಿದಿದ್ದೆ’ ಎಂದು ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಪ್ರಯಾಣಿಕ ತನ್ನ ಸೀಟಿನಿಂದ ಎದ್ದು ತುರ್ತು ನಿರ್ಗಮನ ದ್ವಾರದ ಕಡೆಗೆ ಸಾಗುತ್ತಿರುವುದನ್ನು ಕಂಡ ಕೆಲವು ಪ್ರಯಾಣಿಕರು ವಿಮಾನದ ಸಿಬ್ಬಂದಿಗೆ ತಿಳಿಸಿದ್ದರು. ತುರ್ತು ದ್ವಾರವನ್ನು ವಿಮಾನ ಹಾರಾಟ ನಡೆಸುತ್ತಿದ್ದಾಗ ಗಾಳಿಯ ಒತ್ತಡ ಇರುವ ಕಾರಣ ತೆಗೆಯಲು ಸಾಧ್ಯವೇ ಇಲ್ಲ.

‘ನಾವು ಪ್ರಯಾಣಿಕನ ಹೇಳಿಕೆಯನ್ನು ಪರಿಶೀಲಿಸಿದ್ದೇವೆ. ಅವರು ಹೇಳಿದಂತೆ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ದೃಢಪಟ್ಟಿದೆ. ಶನಿವಾರದ ಘಟನೆ ಗೊಂದಲದಿಂದ ನಡೆದಿದೆ’ ಎಂದು ವಿಮಾನ ನಿಲ್ದಾಣ ಪೊಲೀಸ್‌ ಠಾಣಾಧಿಕಾರಿ ಮೊಹಮ್ಮದ್‌ ಸೋನೊವಾರ್‌ ಖಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.