ADVERTISEMENT

ಮಹಾರಾಷ್ಟ್ರ ರಾಜಕಾರಣ | ನಿಲುವು ಇನ್ನೂ ಅಸ್ಪಷ್ಟ

ಸೋನಿಯಾ ಗಾಂಧಿ ಭೇಟಿ ಮಾಡಿ ರಾಜಕೀಯ ಸ್ಥಿತಿ ವಿವರಿಸಿದ ಶರದ್ ಪವಾರ್

ಪಿಟಿಐ
Published 19 ನವೆಂಬರ್ 2019, 19:45 IST
Last Updated 19 ನವೆಂಬರ್ 2019, 19:45 IST
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರದ್ ಪವಾರ್ –ಪಿಟಿಐ ಚಿತ್ರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರದ್ ಪವಾರ್ –ಪಿಟಿಐ ಚಿತ್ರ   

ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸೋಮವಾರ ಭೇಟಿಯಾದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮಹಾರಾಷ್ಟ್ರದ ರಾಜಕೀಯ ಸ್ಥಿತಿಯನ್ನು ಅವರಿಗೆ ವಿವರಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಪವಾರ್, ಮಹಾರಾಷ್ಟ್ರದಲ್ಲಿ ಮೈತ್ರಿಕೂಟದ ಇತರೆ ಸಣ್ಣಪುಟ್ಟ ಪಕ್ಷಗಳ ಜತೆ ಮಾತುಕತೆ ನಡೆಸಿದ ಬಳಿಕವಷ್ಟೇ ಸರ್ಕಾರ ರಚನೆ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು
ಸ್ಪಷ್ಟಪಡಿಸಿದರು.‘ಮುಂದಿನ ಕ್ರಮಗಳ ಬಗ್ಗೆ ಎನ್‌ಸಿಪಿ ಹಾಗೂ ಕಾಂಗ್ರೆಸ್ ಮುಖಂಡರು ಇನ್ನಷ್ಟು ವಿಸ್ತೃತ ಮಾತುಕತೆ ನಡೆಸಲಿದ್ದಾರೆ’ ಎಂದರು.

ಸೋನಿಯಾ ಗಾಂಧಿ ಅವರ ಜತೆಗಿನ ಮಾತುಕತೆಯಲ್ಲಿ ಸರ್ಕಾರ ರಚನೆ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದು ಪವಾರ್ ಅವರು ಪದೇ ಪದೇ ಹೇಳಿದರು.

ADVERTISEMENT

ಮತ್ತೆ ಸಮೀಕರಣ ಬದಲು?

ಬಿಜೆಪಿ ನೇತೃತ್ವದಲ್ಲಿ ಅಲ್ಪಮತದ ಸರ್ಕಾರ ರಚನೆಯಾದಲ್ಲಿ, ಸರ್ಕಾರಕ್ಕೆ ಎನ್‌ಸಿಪಿ ಬೆಂಬಲ ನೀಡುವ ಸಂಬಂಧ ಮಾತುಕತೆ ನಡೆಯುತ್ತಿದೆ ಎಂಬ ವರದಿಗಳನ್ನು ಶರದ್ ಪವಾರ್ ಅಲ್ಲಗಳೆದಿದ್ದಾರೆ. ‘ಬಿಜೆಪಿ ಜತೆ ಅಂತಹಯಾವುದೇ ಮಾತುಕತೆ ನಡೆದಿಲ್ಲ. ನಾವು ಕಾಂಗ್ರೆಸ್ ಜೊತೆ ಮಾತುಕತೆಯಲ್ಲಿ ತೊಡಗಿದ್ದೇವೆ’ ಎಂದು ಅವರು ಹೇಳಿದರು.

‘ಬಿಜೆ‍ಪಿ–ಶಿವಸೇನಾ ತಮ್ಮ ದಾರಿ ನೋಡಿಕೊಳ್ಳಬೇಕು’ ಎಂಬುದಾಗಿಪವಾರ್ ಸೋಮವಾರ ಮುಂಜಾನೆ ಒಗಟಾಗಿ ಮಾತನಾಡಿದ್ದರು. ಅತ್ತ ರಾಜ್ಯಸಭೆಯಲ್ಲಿ ಎನ್‌ಸಿಪಿಯನ್ನು ಮೋದಿ ಹೊಗಳಿದ್ದರು. ಈ ಎರಡೂ ಘಟನೆಗಳು ಮಹಾರಾಷ್ಟ್ರದಲ್ಲಿ ಮತ್ತೊಂದು ರಾಜಕೀಯ ಸಮೀಕರಣದ ಸುಳಿವು ನೀಡಿದ್ದವು. ಈ ಮಧ್ಯೆ, ಕೇಂದ್ರ ಸಚಿವ ರಾಮದಾಸ್ ಆಠವಲೆ ಅವರು ನೀಡಿರುವ ಹೇಳಿಕೆ ಇನ್ನಷ್ಟು ಊಹಾಪೋಹಗಳಿಗೆ ಪುಷ್ಟಿ ನೀಡಿತು. ‘ಶಿವಸೇನಾಗೆ ಎರಡು ವರ್ಷ ಮುಖ್ಯಮಂತ್ರಿ ಹುದ್ದೆ ನೀಡುವ ಹೊಂದಾಣಿಕೆ ಸೂತ್ರ ತಯಾರಾಗುತ್ತಿದ್ದು, ಈ ಬಗ್ಗೆ ಸೇನಾ ವಕ್ತಾರ ಸಂಜಯ್ ರಾವುತ್ ಜತೆ ಮಾತುಕತೆ ನಡೆಸಿದ್ದೇನೆ’ ಎಂದು ಆಠವಲೆ ಹೇಳಿದ್ದಾರೆ.

ಶಿವಸೇನಾಗೆ ಮೇಯರ್ ಪಟ್ಟ ಖಚಿತ

ಬದಲಾಗುತ್ತಿರುವ ರಾಜಕೀಯ ಸಮೀಕರಣ ಹಾಗೂ ಅಂಕಿ–ಸಂಖ್ಯೆಗಳ ಆಟದ ನಡುವೆಯೂ ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಉಳಿಸಿಕೊಳ್ಳುವಲ್ಲಿ ಶಿವಸೇನಾ ಯಶಸ್ವಿಯಾಗಿದೆ. ಮೇಯರ್ ಚುನಾವಣೆಯಿಂದ ಹೊರಗುಳಿಯಲು ಬಿಜೆಪಿ ನಿರ್ಧರಿಸಿದೆ.

ದೇಶದ ಅತಿದೊಡ್ಡ ಹಾಗೂ ಶ್ರೀಮಂತ ಪಾಲಿಕೆ ಎನಿಸಿರುವ ಮುಂಬೈ, ಕಳೆದ 25 ವರ್ಷಗಳಿಂದ ಶಿವಸೇನಾದ ಹಿಡಿತದಲ್ಲಿದೆ. ನವೆಂಬರ್ 22ರಂದು ಮೇಯರ್ ಚುನಾವಣೆ ನಿಗದಿಯಾಗಿದೆ.

‘ಮೇಯರ್ ಚುನಾವಣೆಯಲ್ಲಿ ಗೆಲ್ಲುವಷ್ಟು ಸಂಖ್ಯಾಬಲ ಪಾಲಿಕೆಯಲ್ಲಿ ನಮಗೆ ಇಲ್ಲ. ಆದರೆ ಪ್ರತಿಪಕ್ಷಗಳ ಜೊತೆ ಕೈಜೋಡಿಸುವುದಿಲ್ಲ. 2022ರಲ್ಲಿ ನಮ್ಮವರೇ ಮೇಯರ್ ಆಗಿರುತ್ತಾರೆ’ ಎಂದುಬಿಜೆಪಿ ಮುಖಂಡಆಶಿಶ್ ಶೆಲಾರ್ ಹೇಳಿದ್ದಾರೆ.

227 ಸದಸ್ಯಬಲದ ಪಾಲಿಕೆಯಲ್ಲಿ ಶಿವಸೇನಾದ 94, ಬಿಜೆಪಿಯ 82, ಕಾಂಗ್ರೆಸ್‌ನ 28, ಎನ್‌ಸಿಪಿಯ 9, ಸಮಾಜವಾದಿ ಪಕ್ಷದ 6 ಸದಸ್ಯರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.